ರಾತ್ರಿ 2:30 ಆಗಿರಬಹುದು. ಎಚ್ಚರವಾಯಿತು, ಎದ್ದು ಕೋಣೆಯಿಂದ ಹೊರ ಬಂದಾಗ ಅಮ್ಮ ಮಲಗಿದ್ದ ಸ್ಥಳದಲ್ಲಿ ಮಲಗಿರಲಿಲ್ಲ. ಮನೆಯಲ್ಲಿ ಜಗಲಿಯ ಕುರ್ಚಿ ಮೇಲೆ ಕುಳಿತು ಅಟ್ಟವನ್ನೇ ದಿಟ್ಟಿಸುತ್ತಿದ್ದರು. ಸೊಂಟದ ಮೇಲೆ ಕೈ ಹಿಡಿದು ಇಡೀ ಕೈ ಕಾಲನ್ನು ಒತ್ತಿ ಹಿಡಿದುಕೊಂಡರು. ನನಗೊಂದು ಸಲ ಭಯವಾಯಿತು. ಸ್ವಲ್ಪ ಹೊತ್ತು ಕಳೆದ ಮೇಲೆ ಮತ್ತೆ ಮಲಗಿದ್ದಲ್ಲಿಗೆ ಬಂದು ಮಲಗಿ ಬಿಟ್ಟರು. ಬೆಳಗ್ಗೆ ಅಮ್ಮ ಎಂದಿನಂತೆ ಎಲ್ಲಾ ಕೆಲಸವನ್ನು ಮಾಡುತ್ತಿದ್ದರು ಅವರ ಮುಖದಲ್ಲಿ ಯಾವ ಬದಲಾವಣೆಯೂ ಕಾಣ್ತಾನೆ ಇರಲಿಲ್ಲ. ಇದು ಒಂದಷ್ಟು ದಿನಗಳವರೆಗೆ ನಡೆಯುತ್ತಾನೆ ಇತ್ತು. ಅಮ್ಮ ಹೇಳಲೂ ಇಲ್ಲ ನಾನು ಕೇಳಲೂ ಇಲ್ಲ. ಆ ದಿನ ಮಧ್ಯಾಹ್ನ ಅಮ್ಮನನ್ನ ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಅವರ ಕೈ ಹಿಡಿದು ಅಮ್ಮ ಹೇಗಿದ್ದೀರಾ? ಎಂದು ಕೇಳಿದಾತ. ಅಮ್ಮ ಎರಡು ಕಣ್ಣಾಲಿಗಳನ್ನ ತುಂಬಿಕೊಂಡು ಹೌದು ಮಗ ಸ್ವಲ್ಪ ನೋವಿದೆ ನಿದ್ದೆ ಬರ್ತಾ ಇಲ್ಲ ಅಂದರು. ಆ ದಿನವೇ ಅಮ್ಮನ ಜೊತೆ ಆಯುರ್ವೇದಿಕ್ ಆಸ್ಪತ್ರೆಗೆ ತೆರಳಿ ನೋವಿಗೆ ಔಷದಿ ತಂದ್ವಿ. ಈಗ ನೆಮ್ಮದಿಯ ನಿದ್ದೆ ಮಾಡ್ತಾರೆ. ಇದು ನನ್ನ ಅಮ್ಮನ ಒಬ್ಬರ ಕಥೆಯಲ್ಲ ಹಲವು ಮನೆಯ ತಾಯಂದಿರ ಯಾರಿಗೂ ತಿಳಿಯದ ಏಕಾಂತ ರಾತ್ರಿಯ ಕತೆ. ಕಣ್ಣೀರು  ಹಾಕ್ತಾರೆ ರಾತ್ರಿಯಲ್ಲಿ ಯಾರು ನೋಡೋದಿಲ್ಲ ಅನ್ನುವ ಕಾರಣಕ್ಕೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ