ಕೋಣೆಯನ್ನ ಕತ್ತಲಾಗಿಸಿಕೊಂಡು ಅತ ಕುಳಿತಿದ್ದಾನೆ. ಆ ಕೊನೆಗೆ ಬೆಳಕು ಬರೋದಿಲ್ಲ ಅಂತಲ್ಲ ಆದರೆ ಆ ಕೋಣೆ ಬೆಳಕು ಅವನನ್ನ ಭಯಪಡಿಸುತ್ತಿದೆ. ದೂರದ ಶಹರಿನಲ್ಲಿ ಬದುಕು ಕಟ್ಟಿಕೊಂಡ ಪುಟ್ಟ ಮನೆ ಅದು. ತಿಂಗಳಿಗೊಂದು ಸಲವೋ ಆರು ತಿಂಗಳಿಗೊಂದು ಸಲವೂ ಸಮಯ ಸಿಕ್ಕಾಗ ಮನೆ ಕಡೆಗೆ ಚಲಿಸುವವ. ಇತ್ತೀಚಿಗೆ ಮನೆಗೆ ಹೋಗಿ ಬಂದಾಗ ಮನೆ ತುಂಬಾ ಓಡಾಡ್ತಾ ಕೆಲಸಗಳನ್ನ ಮಾಡ್ತಾ ಇದ್ದ ಅಮ್ಮ ಆಗಾಗ ಕುಳಿತು ವಿಶ್ರಾಂತಿ ಪಡೆಯುವುದು ಕಾಡ್ತಾ ಇದೆ, ಅಪ್ಪನ ಮುಖದಲ್ಲಿ ಒಂದಷ್ಟು ನೆರಿಗೆಗಳು ಮೂಡಿ ಆಸ್ಪತ್ರೆ ಕಡೆಗೆ ಒಂದೆರಡು ಸಲ ಭೇಟಿ ಮಾಡಿದಿದೆ, ಬಣ್ಣದಿಂದ ತುಂಬಿದ್ದ ಗೋಡೆಗಳು ಬಿರುಕು ಬಿಡುತ್ತಿದೆ, ರಾತ್ರಿ ಹೊತ್ತಲ್ಲಿ ನಿದ್ದೆ ಇಲ್ಲದ ಅಪ್ಪ ಅಮ್ಮ ಚಡಪಡಿಸುವುದು ಕಾಡ್ತಾ ಇದೆ, ಇನ್ನೂ ಕೆಲಸ ಮಾಡೋದಕ್ಕೆ ಆಗದೇ ಇರುವ ಅಪ್ಪ ಅಮ್ಮನನ್ನ ನೆನೆಸಿಕೊಂಡರೆ ಭಯವಾಗ್ತಾ ಇದೆ. ಕೈ ಹಿಡಿದು ನಡೆಸಬೇಕಾದ ನಾನು ದೂರದ ಶಹರಿನಲ್ಲಿ ಸಣ್ಣ ಮೊತ್ತಕ್ಕಾಗಿ ರಾತ್ರಿ ಹಗಲೆನ್ನದೆ ದುಡಿದು ನನ್ನ ಬದುಕನ್ನೇ ದೂಡುವುದಕ್ಕೆ ಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿರುವುದಕ್ಕೆ ಬೇಸರವಿದೆ,ನಾನವರನ್ನು ಹೇಗೆ ನೋಡಿಕೊಳ್ಳುವೆ ಅನ್ನುವ ಭಯವಿದೆ, ಅವರ ಕನಸುಗಳು ಇನ್ನೂ ನನಸಾಗದಿರುವ ಕಾಲದಲ್ಲಿ ನಾನು ಕನಸು ಕಾಣುವುದು ಹೇಗೆ ಅನ್ನುವ ಯೋಚನೆಕಾಡುತ್ತಿದೆ. ಹಾಗಾಗಿ ಹೊರಗೆ ಬೆಳಕಿದ್ದರೂ ಒಳಗೆ ಕತ್ತಲಲ್ಲಿ ಕುಳಿತು ಬೆಳಕನ್ನು ಹುಡುಕುವ ಪ್ರಯತ್ನವಾಗಿದೆ. ಎದ್ದು ನಿಂತು ಕೋಣೆಯ ಕಿಟಕಿ ತೆರೆಯಲು ಭಯವಾಗುತ್ತಿದೆ.ತಾನೇ ತನ್ನ ಬೆಳಕನ್ನ ಹುಡುಕಿಕೊಳ್ಳಬೇಕೋ ಅಥವಾ ಬೇರೆ ಯಾರಾದರೂ ಬಂದು ಬೆಳಕು ಕೊಡುತ್ತಾರೋ ಅನ್ನುವ ಯೋಚನೆಯಲ್ಲಿದ್ದಾನೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ