ಮರ ಮಾತನಾಡುವುದಕ್ಕೆ ಶುರು ಮಾಡಿತು. ಈಗ ಬರ್ತಾ ಇರುವ ವಾತಾವರಣ ಹಿಂದಿನಂತಿಲ್ಲ, ಈ ಮಳೆ ಗಾಳಿ ಬಿಸಿಲು ಒಂಥರ ವಿಚಿತ್ರವಾಗಿದೆ .ನಾನು ಬೀಳ್ತಾ ಇದ್ದೇನೆ ಅನ್ನಿಸತ್ತಿದೆ. ಆದ್ರೆ ಆ ದಿನ ಸೂರ್ಯೋದಯವಾಗ್ತಾ ಹೋದಾಗ ಹಾಗೆ ನನ್ನ ಬದುಕು ಅಸ್ತಂಗತವೋ ಅನ್ನಿಸಲು ಶುರುವಾಗಿದೆ. ಬೀಳುವುದಾದರೆ ಮದ್ಯರಾತ್ರಿಯೋ ಜನರಿಲ್ಲದಾಗ ಬೀಳಲಿ ಅನ್ನುವುದು ನನ್ನಾಸೆ. ಜನರ ಓಡಾಟ ಆರಂಭವಾಯಿತು. ನನ್ನ ಬೇರುಗಳು ಸಡಿಲಗೊಂಡವು.ನಾನು ಯಾರಿಗೂ ತೊಂದರೆ ಆಗಬಾರದು ಅಂತ ಅಂದುಕೊಳ್ಳುತ್ತಿರುವ ಅಷ್ಟರಲ್ಲಿ ಜೋರಾದ ಗಾಳಿಯು ಬೇರನ್ನ ಹಾಗೆ ಸಡಿಲಗೊಳಿಸಿ ನೆಲದಿಂದ ಉರುಳಿಸಿತು. ನಾನು ಬೇಡ ಬೇಡ ಅನ್ನುವಷ್ಟರಲ್ಲಿ ಶಾಲೆಯ ಬಸ್ಸಿನ ಮೇಲೆ ಬಿದ್ದು ಬಿಟ್ಟೆ. ಪುಟ್ಟ ಮಗುವೊಂದರ ಜೀವವನ್ನು ಕೊಂದು ತಿಂದೆ. ಪ್ರತಿ ದಿನ ಬಸ್ಸಿನ ಕಿಟಕಿಯಿಂದ ಆ ಮಗು ನನ್ನನ್ನು ನೋಡಿ ಈ ಮರದ ಹಾಗೆ ನಾನು ಎತ್ತರಕ್ಕೆರಬೇಕು ಅಂತ ಎಷ್ಟೋ ಸಲ ಯೋಚಿಸಿದ್ದಿದೆ. ಆದರೆ ನನ್ನುಸಿರು ನಿಂತ ಹಾಗೆ ಆ ಮಗುವಿನ ಉಸಿರನ್ನು ನಿಲ್ಲಿಸಿದ ನೋವಿದೆ. ನನ್ನ ಕೆಲಸ ಪುಟ್ಟ ಬೀಜದಿಂದ ದೊಡ್ಡ ಮರವಾಗಿ ಹಲವರಿಗೆ ಹಣ್ಣನ್ನು ನೆರಳು ಗಾಳಿ ಕೊಂಬೆ ಎಲೆಗಳನ್ನ ನೀಡಿ ಒಳಿತನ್ನೇ ಹರಸುವುದಷ್ಟೇ ನಾನು ಸಾವನ್ನ ಬಯಸುವವನಲ್ಲ. ಮಣ್ಣು ಅಲ್ಲಲ್ಲಿ ಸಡಿಲಗೊಂಡ ಕಾರಣಗಳಿಂದ ನಾನು ಮರವಾದವ ಇಂದು ಸಾವಿಗೂ ಅದೇ ಸಡಿಲತೆ ಕಾರಣವಾದದ್ದು ವಿಪರ್ಯಾಸ ಕ್ಷಮಿಸಿ ನನ್ನನ್ನ…

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ