ಒಂದು ಊರಿನಲ್ಲಿ ಅಕ್ಕಪಕ್ಕದಲ್ಲೇ ಎರಡು ಮನೆಗಳಿದ್ದವು. ಒಂದು ಬಹಳ ದೊಡ್ಡ ಬಂಗಲೆ. ಮತ್ತೊಂದು ಸಣ್ಣದಾದ ಮಣ್ಣಿನ ಮನೆ. ಪ್ರತಿದಿನ ಬೆಳಗ್ಗೆ ಸೂರ್ಯನ ಕಿರಣಗಳು ಮೊದಲು ಎರಡೂ ಮನೆಗಳ ಮೇಲೂ ಒಂದೇ ರೀತಿಯಾಗಿ ಬೀಳುತ್ತಿದ್ದವು. ಮಳೆ ಬಂದಾಗ ಎರಡೂ ಮನೆಗಳೂ ನೆನೆಯುತ್ತಿದ್ದವು. ಗಾಳಿ ಬೀಸಿದಾಗ ಎರಡೂ ಮನೆಗಳೂ ತಂಪನ್ನು ಅನುಭವಿಸುತ್ತಿದ್ದವು. ಒಂದು ದಿನ ಸಣ್ಣ ಮನೆ ದೊಡ್ಡ ಮನೆಯನ್ನು ಕೇಳಿತು."ನೀನು ಎಷ್ಟು ದೊಡ್ಡದಾಗಿದ್ದೀಯ! ನಿನಗೆ ನನ್ನ ಮೇಲೆ ಅಸೂಯೆ ಬರುವುದಿಲ್ಲವೇ?" ದೊಡ್ಡ ಮನೆ ನಗುತ್ತಾ ಹೇಳಿತು."ಅಸೂಯೆ ಯಾಕೆ? ನಿನಗೆ ಸಿಗುವ ಪ್ರೀತಿ ನಿನಗೆ, ನನಗೆ ಸಿಗುವ ಪ್ರೀತಿ ನನಗೆ. ನಮ್ಮ ಕೆಲಸ ಆಶ್ರಯ ಕೊಡುವುದು. ಹೋಲಿಕೆ ಮಾಡುವುದು ಅಲ್ಲ."ಸ್ವಲ್ಪ ಹೊತ್ತಿನ ನಂತರ ದೊಡ್ಡ ಮನೆ ಸಣ್ಣ ಮನೆಯನ್ನು ಕೇಳಿತು. 'ನಾನು ದೊಡ್ಡವಳು, ನೀನು ಸಣ್ಣವಳು. ನಿನಗೆ ಬೇಸರವಾಗುವುದಿಲ್ಲವೇ?" ಸಣ್ಣ ಮನೆ ನಗುತ್ತಾ ಉತ್ತರಿಸಿತು.'ನನ್ನೊಳಗೆ ವಾಸಿಸುವವರ ನಗುವೇ ನನ್ನ ಸಂಪತ್ತು. ಗಾತ್ರದಿಂದ ಸಂತೋಷ ಅಳೆಯಲು ಸಾಧ್ಯವಿಲ್ಲ."ಹೀಗೆ ವರ್ಷಗಳು ಕಳೆದವು. ಎರಡು ಮನೆಗಳೂ ಯಾವತ್ತೂ ಜಗಳವಾಡಲಿಲ್ಲ. ಅಸೂಯೆ ಪಡಲಿಲ್ಲ. ಬೇಸರಿಸಿಕೊಳ್ಳಲಿಲ್ಲ.ಆದರೆ...ಆ ಮನೆಗಳೊಳಗೆ ವಾಸಿಸುವ ಮನುಷ್ಯರು ಮಾತ್ರ ಬದಲಾಗುತ್ತಾ ಹೋದರು.ದೊಡ್ಡ ಮನೆಯವರು ಸಣ್ಣ ಮನೆಯವರನ್ನು ನೋಡಿ, "ನಮ್ಮಂತಾಗಬೇಕು" ಎಂದರು.ಸಣ್ಣ ಮನೆಯವರು ದೊಡ್ಡ ಮನೆಯವರನ್ನು ನೋಡಿ, ಅವರಂತಾಗಬೇಕು' ಎಂದರು.ಹೀಗೆ ಹೋಲಿಕೆ, ಅಸೂಯೆ, ಅಹಂಕಾರ, ಬೇಸರಗಳು ಮನುಷ್ಯರ ಮನಸ್ಸಿನಲ್ಲಿ ಮನೆ ಕಟ್ಟಿದವು ಒಂದು ಸಂಜೆ ಆ ಎರಡು ಮನೆಗಳು ಮತ್ತೆ ಮಾತಾಡಿಕೊಂಡವು. ''ನಮ್ಮ ಗೋಡೆಗಳು ಇಷ್ಟು ವರ್ಷಗಳಾದರೂ ಬದಲಾಗಲಿಲ್ಲ. ಆದರೆ ನಮ್ಮೊಳಗೆ ವಾಸಿಸುವ ಮನಸ್ಸುಗಳು ಮಾತ್ರ ದಿನದಿಂದ ದಿನಕ್ಕೆ ಬದಲಾಗುತ್ತಿವೆ. ಆಗ ದೊಡ್ಡ ಮನೆ ಹೇಳಿತು:'ಮನೆ ದೊಡ್ಡದೋ ಸಣ್ಣದೋ ಎನ್ನುವುದು ಜೀವನವನ್ನು ಬದಲಾಯಿಸುವುದಿಲ್ಲ. ಮನಸ್ಸು ದೊಡ್ಡದೋ ಸಣ್ಣದೋ ಎನ್ನುವುದೇ ಜೀವನವನ್ನು ಬದಲಾಯಿಸುತ್ತದೆ."

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ