ಆದಿತ್ಯ ತನ್ನ ತಂದೆ-ತಾಯಿಯೊಂದಿಗೆ ಸಂತೋಷದಿಂದ ಬದುಕುತ್ತಿದ್ದ. ಅವರ ಮನೆ ಶ್ರೀಮಂತವಾಗಿರಲಿಲ್ಲ. ಆದರೆ ಪ್ರೀತಿಯಿಂದ ತುಂಬಿತ್ತು. ತಾಯಿಯ ಕೈಯಿಂದ ಮಾಡಿದ ಊಟವೇ ಅವರ ಮನೆಯ ಹಬ್ಬವಾಗಿತ್ತು. ಆದರೆ ಬದುಕು ಯಾವಾಗಲೂ ನಮ್ಮ ಇಷ್ಟದಂತೆ ಸಾಗುವುದಿಲ್ಲ.ಒಂದು ದಿನ ಅನಿರೀಕ್ಷಿತ ಅಪಘಾತದಲ್ಲಿ ಆದಿತ್ಯನ ತಂದೆ ಸಾವನ್ನಪ್ಪಿದರು. ಸಾಲದ ಹೊರೆ, ಸಮಾಜದ ಒತ್ತಡ, ಒಂಟಿತನ.ಇವೆಲ್ಲವೂ ತಾಯಿಯ ಹೆಗಲ ಮೇಲೆ ಬಿದ್ದವು. ಮಗನ ಭವಿಷ್ಯಕ್ಕಾಗಿ, ಬದುಕಿನ ಅನಿವಾರ್ಯತೆಯಿಂದ ಬಂಧುಗಳ ಒತ್ತಾಯಕ್ಕೆ ಮಣಿದು ತಾಯಿ ಎರಡನೇ ಮದುವೆಯಾದಳು.ಹೊಸ ಮನೆ. ಹೊಸ ಸಂಬಂಧಗಳು. ಹೊಸ ಬದುಕು.

ಆದರೆ ಆ ಹೊಸ ಬದುಕಿನಲ್ಲಿ ಆದಿತ್ಯ ಮಾತ್ರ ಹಳೆಯವನಾಗಿಯೇ ಉಳಿದ. ಅವನ ಹೊಸ ತಂದೆಗೆ ಈಗಾಗಲೇ ಇಬ್ಬರು ಮಕ್ಕಳಿದ್ದರು. ಆ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ತಾಯಿಯ ಮೇಲೆ ಬಂತು. ಅವರ ಓದು, ಆರೋಗ್ಯ, ಅವರ ಸಂತೋಷ... ಇವೆಲ್ಲದರ ನಡುವೆ ಅದಿತ್ಯನ ಪಾಲಿಗೆ ಸಿಗಬೇಕಿದ್ದ ಸಮಯ, ಪ್ರೀತಿ ಮತ್ತು ಮಮತೆ ನಿಧಾನವಾಗಿ ಕಡಿಮೆಯಾಗತೊಡಗಿತು. ತಾಯಿ ಅವನನ್ನು ದ್ವೇಷಿಸಲಿಲ್ಲ. ಅವನಿಗೆ ಸಿಗಬೇಕಿದ್ದ ಪ್ರೀತಿ ಎಲ್ಲೋ ಕಳೆದುಹೋಯಿತು, ಎಲ್ಲರ ನಡುವೆ ಒಂಟಿಯಾಗಿದ್ದ. ಅಜ್ಜಿಯ ಆಶ್ರಯ ಬೇಕಾಯಿತು, ಅವರ ಬಳಿ ಹಣ ಇರಲಿಲ್ಲ. ದೊಡ್ಡ ಮನೆ ಇರಲಿಲ್ಲ.ಐಶಾರಾಮಿ ಬದುಕಿರಲಿಲ್ಲ.ಆದರೆ ಅವಳ ಬಳಿ ಜೀವನದ ಅನುಭವವಿತ್ತು.ಪ್ರೀತಿ ಇತ್ತು.ಸಂಸ್ಕಾರ ಇತ್ತು.

ಅವನು ತನ್ನ ನೋವಿನ ಬಗ್ಗೆ ಯೋಚಿಸುವುದನ್ನು ಬಿಟ್ಟ.ಪುಸ್ತಕಗಳ ಜೊತೆ ಸ್ನೇಹ ಬೆಳೆಸಿದ. ಹಗಲು ಓದು. ಸಂಜೆ ಕೆಲಸ. ರಾತ್ರಿ ಕನಸು. ಬಡತನ ಅವನನ್ನು ತಡೆಯಲಿಲ್ಲ. ಒಂಟಿತನ ಅವನನ್ನು ಸೋಲಿಸಲಿಲ್ಲ. ಅವನು ಬದುಕಿದ ಒಂದು ದಿನವೂ ಬದಕನ್ನ ದೂರದೇ ಭಗವಂತನ ಪ್ರಶ್ನಿಸದೆ ಬದುಕಿದ ಬದುಕು ಕಾಯುತ್ತಲೇ ಇತ್ತು

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ