ರಾಘವ್ ಊರಿನಲ್ಲಿ ಎಲ್ಲರಿಗೂ ಬೇಕಾದ ಹುಡುಗ. ಸರಕಾರಿ ಕಾರ್ಯಕ್ರಮಗಳಿರಲಿ ಧಾರ್ಮಿಕ ಸಭೆಗಳಿರಲಿ ಪಕ್ಷಗಳ ಸಂಘಟನೆ ಇರಲಿ ಎಲ್ಲದರಲ್ಲೂ ಆತ ಮುಂಚೂಣಿಯಲ್ಲಿದ್ದ. ಯಾರಿಗಾದರೂ ಕಾರ್ಯಕ್ರಮ ಅಂದರೆ ಅವನೇ ಮುಂದೆ. ಸಹಾಯ ಬೇಕೆಂದರೆ ಮೊದಲು ಓಡಿ ಬರುವುದು ಅವನೇ. ಆ ದಿನ ಪಕ್ಷದ ಕಾರ್ಯಕ್ರಮ ಒಂದರಲ್ಲಿ ಬಾವುಟ ಬೀಸುತ್ತಿರುವಾಗ ಆಯ್ತಪ್ಪಿ ಕೆಳಗಿ ಬಿದ್ದುಬಿಟ್ಟ. ಆಗ ಒಂದು ಕ್ಷಣ ಉಸಿರು ನಿಂತಂತಾಗಿ ಮತ್ತೆ ದೇಹದೊಳಗೆ ಪ್ರವೇಶವಾದರೂ ಎದ್ದು ನಡೆಯುವ ಸ್ಥಿತಿಗೆ ಬರಲು ಆಗಲೇ ಇಲ್ಲ. ಆಸ್ಪತ್ರೆಯ ಖರ್ಚುಗಳ ಪಟ್ಟಿ ದೊಡ್ಡದಾಯಿತು, ಮನೆಯಲ್ಲಿ ಅಮ್ಮನ ಸಾಲ ಹೆಚ್ಚಾಯಿತು. ಮೊದಲಿಗೆ ಒಂದಷ್ಟು ದಿನ ಗೆಳೆಯರು, ಪಕ್ಷ ಸಂಘಟನೆ ಎಲ್ಲವೂ ಆರೋಗ್ಯ ವಿಚಾರಿಸುವವರೇ ನಾವಿದ್ದೇವೆ ಅನ್ನುವವರು ಆದರೆ ದಿನಗಳು ದಾಟುತ್ತಾ ಹೋದ ಹಾಗೆ ಅವರವರಿಗೆ ಅವರವರ ಮನೆಯ ಜವಾಬ್ದಾರಿಗಳೇ ದೊಡ್ಡದಾದವು. ಈತ ಅಪರಿಚಿತನಾದ, ಅವನ ಮನೆಯ ದಾರಿಯಲ್ಲಿ ಹೋಗುವುದೇ ಮರೆತುಹೋಗಿತ್ತು. ವಿಳಾಸವಂತೂ ಎಲ್ಲರ ಕೈ ತಪ್ಪಿ ಹೋಗಿತ್ತು. ಆತನಿಗೆ ಬೇಕಾದನ್ನು ಅಮ್ಮನೇ ಕಷ್ಟಪಟ್ಟು ಹುಡುಕುವ ಪರಿಸ್ಥಿತಿ ಉಂಟಾಯಿತು. ಕಣ್ಣೆತ್ತಿದರೆ ತಿರುಗುತ್ತಿರುವ ಫ್ಯಾನ್ ಮಾತ್ರ ಆತನ ಸಂಗಾತಿಯಾಯಿತು. ಕೆಲಸದ ನಡುವೆಯೂ ಆರೋಗ್ಯ ವಿಚಾರಿಸುವ ಅಮ್ಮ ಬಂಧುವಾದರು. ಈಗಲೂ ಮಲಗಿದ್ದಾನೆ ಆತನ ಗೋಡೆಯ ಮೇಲೆ ಅಂಟಿಸಿದ್ದ ಪಕ್ಷ, ಸಂಘಟನೆ ಎಲ್ಲಾ ಚಿತ್ರಗಳನ್ನ ಅಮ್ಮ ಕಿತ್ತು ಬಿಸಾಡಿದ್ದಾರೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!