ಅವಳು ಅವನಿಗಾಗಿ ಕಾಯುತ್ತಿದ್ದಳು. ಅವಳಿಗೆ ದೊಡ್ಡ ದೊಡ್ಡ ಕನಸುಗಳೇನೂ ಇರಲಿಲ್ಲ. ಅವನು ಗೆಲ್ಲಬೇಕು ಅಷ್ಟೇ. ಅವನ ಗೆಲುವಿನ ದಿನವನ್ನು ಕಣ್ಣಾರೆ ನೋಡಬೇಕು, ಅವನ ಮುಖದ ಮೇಲಿನ ಆ ಒಂದು ನಗುವನ್ನು ತನ್ನ ಕಣ್ಣಲ್ಲಿ ತುಂಬಿಕೊಳ್ಳಬೇಕು ಎಂಬುದೇ ಅವಳ ಕನಸು. ಅವನು ಸೋತಾಗ ಅವನಿಗಿಂತ ಹೆಚ್ಚು ನೋವಾಗುತ್ತಿತ್ತು ಅವಳಿಗೆ. ಆದರೆ ಆ ನೋವನ್ನು ಅವನ ಮುಂದೆ ಎಂದೂ ತೋರಿಸುತ್ತಿರಲಿಲ್ಲ. ನೀನು ಗೆಲ್ಲುತ್ತೀಯಾ ಎಂದು ಪ್ರತಿಸಲವೂ ಅವನ ಕೈ ಹಿಡಿದು ಹೇಳುತ್ತಿದ್ದಳು.ಅವನು ಗೆಲುವಿನ ಕಡೆ ಓಡುತ್ತಿದ್ದ. ಅವಳು ಅವನ ಹಿಂದೆ ನಿಂತು, ಅವನ ಪ್ರತಿಯೊಂದು ಹೆಜ್ಜೆಯನ್ನೂ ಪ್ರಾರ್ಥನೆಯಂತೆ ಕಾಯುತ್ತಿದ್ದಳು. ದಿನಗಳು ಕಳೆದವು. ಹೋರಾಟಗಳು ಹೆಚ್ಚಾದವು. ಅವನಿಗೆ ಗೆಲುವು ದೂರವಾಗುತ್ತಲೇ ಹೋಯಿತು. ಆದರೂ ಅವಳ ಕಾಯುವಿಕೆ ಮಾತ್ರ ಕಡಿಮೆಯಾಗಲಿಲ್ಲ. ಒಂದು ದಿನ, ಕೊನೆಗೂ ಅವನು ಗೆದ್ದ. ಎಲ್ಲರೂ ಅವನನ್ನು ಅಭಿನಂದಿಸುತ್ತಿದ್ದರು. ಅವನ ಹೆಸರು ಘೋಷಣೆಗಳ ನಡುವೆ ಮೊಳಗುತ್ತಿತ್ತು. ಆದರೆ ಅವನ ಕಣ್ಣುಗಳು ಮಾತ್ರ ಯಾರನ್ನೋ ಹುಡುಕುತ್ತಿದ್ದವು. ಜನಸಂದಣಿಯ ಕೊನೆಯಲ್ಲಿ ಅವಳು ನಿಂತಿದ್ದಳು. ಕಣ್ಣಲ್ಲಿ ಕಣ್ಣೀರು ತುಟಿಗಳ ಮೇಲೆ ನಗು. ಅವನು ಅವಳ ಕೈ ಹಿಡಿದ.ಆಗ ಅವನಿಗೆ ಅರ್ಥವಾಯಿತು ಕೆಲವು ಜನರು ನಮ್ಮ ಗೆಲುವನ್ನು ತಮ್ಮ ಕನಸಾಗಿಸಿಕೊಂಡು ಬದುಕುತ್ತಾರೆ. ಅಂತಹವರಿಗಾಗಿ ಗೆಲ್ಲುವುದು ಗೆಲುವಿಗಿಂತಲೂ ದೊಡ್ಡ ಗೆಲುವು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!