ಅದೊಂದು ಪೊಲೀಸ್ ಸ್ಟೇಷನ್‌ ಅಲ್ಲಿ ಸಮವಸ್ತ್ರಕ್ಕಿಂತಲೂ ಅಧಿಕಾರವೇ ದೊಡ್ಡದಾಗಿತ್ತು. ಬಾಗಿಲು ದಾಟಿ ಒಳಗೆ ಬಂದ ಪ್ರತಿಯೊಬ್ಬರನ್ನೂ ಮನುಷ್ಯರಂತೆ ನೋಡುತ್ತಿರಲಿಲ್ಲ. ತಪ್ಪಿತಸ್ಥರಾಗಿದ್ದರೂ, ನಿರಪರಾಧಿಗಳಾಗಿದ್ದರೂ ಅವರ ಕಣ್ಣಿಗೆ ಎಲ್ಲರೂ ಒಂದೇ. ಅವರ ಕೈಯಲ್ಲಿದ್ದ ಲಾಠಿ ಕಾನೂನಿಗಿಂತ ದೊಡ್ಡದಾಗಿತ್ತು. ಅವರ ಮಾತಿನಲ್ಲಿದ್ದ ಅಹಂಕಾರ ನ್ಯಾಯಕ್ಕಿಂತ ಗಟ್ಟಿಯಾಗಿತ್ತು. ದೂರು ಕೊಡಲು ಬಂದವರು ಹೆದರಿಕೊಂಡು ಹಿಂದಿರುಗುತ್ತಿದ್ದರು. ಸಹಾಯ ಕೇಳಲು ಬಂದವರು ಕಣ್ಣೀರಿನಿಂದ ಹೊರಹೋಗುತ್ತಿದ್ದರು. ಕೆಲವರ ಬದುಕು ಆ ಸ್ಟೇಷನ್‌ ಗೋಡೆಗಳೊಳಗೇ ಮುರಿದುಹೋಯಿತು. ಕೆಲವರ ಉಸಿರು ಅಲ್ಲಿಯೇ ನಿಂತಿತು. ಆದರೂ ಆ ಸಮವಸ್ತ್ರದೊಳಗಿದ್ದವರಿಗೆ ಬದುಕಿನ ಬೆಲೆ ಅರ್ಥವಾಗಲಿಲ್ಲ. ಅಧಿಕಾರ ನಮ್ಮದು... ನಮ್ಮನ್ನು ಯಾರೂ ಏನೂ ಮಾಡಲಾಗದು ಎಂಬ ಅಹಂಕಾರ ಅವರ ನರನಾಡಿಗಳಲ್ಲಿ ಬೆರೆತುಹೋಗಿತ್ತು. ಆದರೆ ಕಾಲ ಯಾರ ಅಧಿಕಾರಕ್ಕೂ ಹೆದರುವುದಿಲ್ಲ. ಒಬ್ಬೊಬ್ಬರಾಗಿ ಅವರ ಬದುಕಿನಲ್ಲಿ ಸಾವು ಬಾಗಿಲು ತಟ್ಟತೊಡಗಿತು. ಅಷ್ಟರಲ್ಲೇ ಅವರಿಗೆ ಮೊದಲ ಬಾರಿಗೆ ಬದುಕಬೇಕು ಅನ್ನಿಸಿತು. ದೇವಸ್ಥಾನದಿಂದ ದೇವಸ್ಥಾನಕ್ಕೆ ಓಡಿದರು. ದೇವರ ಮುಂದೆ ಕೈಮುಗಿದರು. ತಮ್ಮ ತಪ್ಪುಗಳನ್ನೆಲ್ಲ ನೆನೆದು ಕಣ್ಣೀರಿಟ್ಟರು. ಒಂದೇ ಒಂದು ಅವಕಾಶ ಕೊಡು ದೇವರೇ... ಇನ್ನು ಯಾರಿಗೂ ನೋವು ಕೊಡಲ್ಲ..."ಎಂದು ಬೇಡಿಕೊಂಡರು. ಆದರೆ...ಅವರ ಕಣ್ಣೀರಿಗೆ ದೇವರು ಕರಗಲಿಲ್ಲ. ಬಹುಶಃ ಅದು ದೇವರ ಶಾಪವಲ್ಲ.ಅವರ ಕೈಗಳಿಂದ ಒರೆಸಲಾಗದೆ ಉಳಿದ ನೂರಾರು ಕಣ್ಣೀರಿನ ಶಾಪವಾಗಿತ್ತು. ಅವರು ಎಷ್ಟು ದೇವರನ್ನು ಬೇಡಿಕೊಂಡರೂ, ಎಷ್ಟು ಹಣ ಕೊಟ್ಟರೂ, ಎಷ್ಟು ಪೂಜೆ ಮಾಡಿಸಿದರೂ ಹೋದ ಜೀವಗಳು ಮರಳಿ ಬರಲಿಲ್ಲ. ಕೊನೆಗೆ ಆ ಊರಿನ ಆ ಪೊಲೀಸ್ ಸ್ಟೇಷನ್‌ನ ಬಾಗಿಲಿಗೆ ಶಾಶ್ವತವಾಗಿ ಬೀಗ ಬಿತ್ತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ