ಅವತ್ತು ಸಮುದ್ರದ ತೀರದಲ್ಲಿ ಮೋಡಗಳೆಲ್ಲವೂ ಒಂದೆಡೆ ಸೇರಿದ್ದವು. ಒಂದೊಂದು ಊರಿನ ಮೋಡಗಳು, ಗಾಳಿಯ ಜೊತೆ ಮಾತಾಡುತ್ತಾ ನಾನು ನನ್ನ ಪಾಲಿನ ಕೆಲಸ ಮಾಡುತ್ತೇನೆ. ನನಗೆ ಸಿಕ್ಕ ಜಾಗದಲ್ಲಿ ಕಾಲಕಾಲಕ್ಕೆ ಮಳೆ ಸುರಿಸಿ ಮುಂದೆ ನಾಗುತ್ತೇನೆ. ಮಳೆ ಸುರಿಸುವುದು ನನ್ನ ಕರ್ತವ್ಯ. ಇನ್ನೊಂದು ಮೋಡ “ನನಗೂ ಮಳೆ ಸುರಿಸಬೇಕೆಂಬ ಆಸೆಯಿದೆ. ಆದರೆ ಮನುಷ್ಯರು ತಮ್ಮ ಸುತ್ತಲಿನ ಪರಿಸರವನ್ನು ನೋಡಿಕೊಳ್ಳುತ್ತಿಲ್ಲ. ಮರಗಳನ್ನು ಕಡಿಯುತ್ತಾರೆ. ನದಿಗಳನ್ನು ಕಲುಷಿತಗೊಳಿಸುತ್ತಾರೆ. ನೀರನ್ನು ಪೋಲು ಮಾಡುತ್ತಾರೆ. ಇಂಥವರಿಗಾಗಿ ನಾವು ಯಾಕೆ ಮಳೆ ಸುರಿಸಬೇಕು?"ಮತ್ತೊಂದು ಮೋಡ ಅದು ಅವರ ತಪ್ಪು. ಆದರೆ ಅವರ ತಪ್ಪಿಗೆ ನಾವು ಶಿಕ್ಷೆ ಕೊಡಬೇಕೇ? ಒಬ್ಬ ಮನುಷ್ಯ ತಪ್ಪು ಮಾಡಿದನೆಂದು ಇಡೀ ಭೂಮಿಯನ್ನೇ ಬಾಯಾರಿಸಬೇಕಾ? ಆ ಮಣ್ಣಿನಲ್ಲಿ ಇನ್ನೂ ಎಷ್ಟೋ ಜೀವಿಗಳಿವೆ. ಮಳೆಗಾಗಿ ಕಾಯುತ್ತಿರುವ ಎಷ್ಟೋ ಕಣ್ಣುಗಳಿವೆ." ಮೋಡಗಳ ನಡುವೆ ಮತ್ತೆ ವಾದ ಶುರುವಾಯಿತು.ಮನುಷ್ಯ ಬದಲಾಗಬೇಕು.ಬದಲಾಗುವವರೆಗೂ ಕಾಯೋಣ .ಅವನು ತನ್ನ ತಪ್ಪನ್ನು ಅರಿತುಕೊಳ್ಳಲಿ. ಆದರೆ ಅಷ್ಟರಲ್ಲಿ ಭೂಮಿ ಒಣಗಿಹೋದರೆ?"

ಹೀಗೆ ಮಾತು, ವಾದ, ಪ್ರತಿವಾದಗಳು ನಡೆಯುತ್ತಲೇ ಇದ್ದವು.ಕೊನೆಗೆ ಎಲ್ಲ ಮೋಡಗಳೂ ಸಮುದ್ರ ರಾಜನ ಬಳಿಗೆ ಹೋದವು. ಅಲೆಗಳನ್ನು ಎಬ್ಬಿಸುತ್ತಿದ್ದ ಸಮುದ್ರ ರಾಜ ಅವರ ಮಾತುಗಳನ್ನೆಲ್ಲಾ ಶಾಂತವಾಗಿ ಕೇಳಿಸಿಕೊಂಡು.ನಿಮ್ಮೆಲ್ಲರ ಮಾತುಗಳಲ್ಲೂ ಸತ್ಯವಿದೆ. ಮನುಷ್ಯ ತಪ್ಪು ಮಾಡುತ್ತಿದ್ದಾನೆ. ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಅದನ್ನು ನೀವು ಪ್ರಶ್ನಿಸುವುದೂ ತಪ್ಪಲ್ಲ. ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ.ನಾವು ಯಾರ ತಪ್ಪಿಗೂ ಶಿಕ್ಷೆ ಕೊಡುವವರು ಅಲ್ಲ. ನಾವು ಬದುಕನ್ನು ಕೊಡುವವರು.ಈ ಭೂಮಿಯನ್ನು ಉಳಿಸಬೇಕಾದ ಜವಾಬ್ದಾರಿ ಮನುಷ್ಯನದ್ದಷ್ಟೇ ಅಲ್ಲ. ಪ್ರಕೃತಿಯ ಪ್ರತಿಯೊಂದು ಅಂಶಕ್ಕೂ ತನ್ನದೇ ಆದ ಕರ್ತವ್ಯವಿದೆ. ನೀವು ಮಳೆ ಸುರಿಸಬೇಕು. ನಾನು ನೀರನ್ನು ಹೊತ್ತುಕೊಂಡಿರಬೇಕು. ನದಿಗಳು ಹರಿಯಬೇಕು. ಮರಗಳು ಉಸಿರಾಡಬೇಕು.ಮಳೆ ನಿಂತರೆ ನದಿಗಳು ಒಣಗುತ್ತವೆ. ಮರಗಳು ಒಣಗುತ್ತವೆ. ಮಣ್ಣು ಸಾಯುತ್ತದೆ.ಆದರೆ ಮನುಷ್ಯ ಯಾವಾಗ ಬದಲಾಗುತ್ತಾನೆ?ಸಮುದ್ರ ರಾಜ ನಗುತ್ತಾ ಹೇಳಿದ, ಕಾಲ ಉತ್ತರ ಕೊಡುತ್ತದೆ.ಒಂದು ದಿನ ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಅವನು ಕಳೆದುಕೊಂಡ ಮರದ ನೆರಳನ್ನು ಹುಡುಕುತ್ತಾನೆ. ನೀರಿನ ಒಂದು ಹನಿಯ ಬೆಲೆಯನ್ನು ತಿಳಿದುಕೊಳ್ಳುತ್ತಾನೆ.ಅವನು ಬದಲಾಗುವವರೆಗೂ ನಾವು ನಮ್ಮ ಕರ್ತವ್ಯವನ್ನು ಬಿಟ್ಟುಬಿಟ್ಟರೆ, ಅವನ ತಪ್ಪಿಗೆ ಶಿಕ್ಷೆ ಕೊಡುವ ಮುನ್ನವೇ ನಾವು ಬದುಕನ್ನೇ ಕಳೆದುಕೊಳ್ಳುತ್ತೇವೆ. ಆದ್ದರಿಂದ ನೀವು ನೀರು ತುಂಬಿಸಿಕೊಳ್ಳಿ ಮಳೆ ಸುರಿಸಿ ಭೂಮಿ ಹಸಿರಾಗಲಿ. ನದಿಗಳು ಹರಿಯಲಿ. ಎಲ್ಲರೂ ಬದುಕಲಿ."

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ