ಬೆಳಗಿನ ಜಾವ ಹಕ್ಕಿಯೊಂದು ತನ್ನ ಗೂಡಿನಿಂದ ಹಾರಿತು“ಲೋಕ ಹೇಗಿದೆ?” ಎಂದು ಅದರ ಮರಿ ಕೇಳಿತು. ಹೋಗಿ ನೋಡಿ ಬರುತ್ತೇನೆ,”ಎಂದು ಹಕ್ಕಿ ಆಕಾಶಕ್ಕೆ ಏರಿತು. ಮೊದಲು ಅದು ಹಸಿರು ಕಾಡಿನ ಮೇಲೆ ಹಾರಿತು. ಒಂದು ಕಾಲದಲ್ಲಿ ಸಾವಿರಾರು ಮರಗಳಿದ್ದ ಜಾಗದಲ್ಲಿ ಈಗ ಮನೆಗಳು, ರಸ್ತೆಗಳು, ಯಂತ್ರಗಳು ಕಾಣಿಸಿದವು.

ಒಂದು ನದಿ ಕಾಣಿಸಿತು. ಆದರೆ ನೀರು ನೀಲಿಯಾಗಿರಲಿಲ್ಲ. ಕಸ, ಪ್ಲಾಸ್ಟಿಕ್, ಕೊಳಚೆಯಿಂದ ತುಂಬಿತ್ತು. ಇನ್ನೂ ಮುಂದೆ ಹಾರಿದಾಗ ಒಂದು ದೊಡ್ಡ ನಗರ ಸಿಕ್ಕಿತು.ಎಲ್ಲೆಡೆ ಎತ್ತರದ ಕಟ್ಟಡಗಳು. ಸಾವಿರಾರು ಜನರು. ಪ್ರತಿಯೊಬ್ಬರ ಕೈಯಲ್ಲೂ ಒಂದು ಚಿಕ್ಕ ಪರದೆ. ಒಬ್ಬರನ್ನೊಬ್ಬರು ನೋಡದೆ, ಪರದೆಗಳನ್ನೇ ನೋಡುತ್ತಿದ್ದರು.ಹಕ್ಕಿಗೆ ಆಶ್ಚರ್ಯವಾಯಿತು.

“ಇಷ್ಟೊಂದು ಜನ ಇದ್ದರೂ... ಯಾರೂ ಯಾರನ್ನೂ ನೋಡುತ್ತಿಲ್ಲವಲ್ಲ!” ಸಂಜೆಯಾಗುತ್ತಿತ್ತು.ಅದು ಒಂದು ಮನೆಯ ಕಿಟಕಿಯ ಬಳಿ ಕುಳಿತಿತು.ಒಳಗೆ ಒಂದು ಮಗು ಪುಸ್ತಕ ಹಿಡಿದು ಕುಳಿತಿತ್ತು. ಅದರ ಪಕ್ಕದಲ್ಲೇ ತಾಯಿ ಮೊಬೈಲ್‌ನಲ್ಲಿ ಮುಳುಗಿದ್ದಳು. ತಂದೆ ಕಂಪ್ಯೂಟರ್ ಮುಂದೆ ಕುಳಿತಿದ್ದ.ಮಗು ನಿಧಾನವಾಗಿ ಕೇಳಿತು, ಅಮ್ಮಾ... ಇಂದು ನನ್ನ ಜೊತೆ ಸ್ವಲ್ಪ ಮಾತಾಡ್ತೀಯಾ?”ತಾಯಿ ತಲೆ ಎತ್ತಲಿಲ್ಲ.

ಹಕ್ಕಿಯ ಹೃದಯಕ್ಕೆ ಏನೋ ಚುಚ್ಚಿದಂತಾಯಿತು.ಅದು ಮತ್ತೆ ಆಕಾಶಕ್ಕೆ ಹಾರಿತು.ರಾತ್ರಿ, ದೂರದ ಬೆಟ್ಟದ ಮೇಲೆ ಕುಳಿತು ಕೆಳಗಿನ ಲೋಕವನ್ನು ನೋಡಿತು. ಮನುಷ್ಯನು ಆಕಾಶ ಮುಟ್ಟುವ ಕಟ್ಟಡಗಳನ್ನು ಕಟ್ಟಿದ್ದ.ಸಮುದ್ರ  ದಾಟುವ ಹಡಗುಗಳನ್ನು ಮಾಡಿದ್ದ. ಚಂದ್ರನನ್ನು ತಲುಪಿದ್ದ. ಆದರೆ...ತನ್ನ ಮನೆಯಲ್ಲಿರುವ ಮನುಷ್ಯನ ಹೃದಯವನ್ನು ತಲುಪಲು ಮಾತ್ರ ಅವನಿಗೆ ಸಮಯವಿರಲಿಲ್ಲ.ಹಕ್ಕಿ ಬೆಳಗ್ಗೆ ತನ್ನ ಗೂಡಿಗೆ ಮರಳಿತು.ಮರಿ ಓಡಿಬಂದು ಕೇಳಿತು, ಅಮ್ಮಾ... ಲೋಕ ಹೇಗಿದೆ?” ಹಕ್ಕಿ ಬಹಳ ಹೊತ್ತು ಮೌನವಾಗಿತ್ತು. ನಂತರ ಹೇಳಿತು,ಲೋಕ ತುಂಬಾ ದೊಡ್ಡದಾಗಿದೆ ಮಗು… ಆದರೆ ಮನುಷ್ಯನ ಮನಸ್ಸು ಮಾತ್ರ ದಿನದಿಂದ ದಿನಕ್ಕೆ ಚಿಕ್ಕದಾಗುತ್ತಿದೆ.” ಮರಿ ಏನೂ ಅರ್ಥವಾಗದೆ ತಾಯಿಯ ರೆಕ್ಕೆಯೊಳಗೆ ಸೇರಿಕೊಂಡಿತು.ಹಕ್ಕಿ ಮಾತ್ರ ದೂರದ ಆಕಾಶವನ್ನು ನೋಡುತ್ತಿತ್ತು. ಅಲ್ಲಿಂದ ಕೆಳಗೆ ನೋಡಿದಾಗ… ಕಾಡು ಕಾಣುತ್ತಿರಲಿಲ್ಲ.ನದಿ ಕಾಣುತ್ತಿರಲಿಲ್ಲ. ಆದರೆ ಮನುಷ್ಯನ ನೆರಳು ಮಾತ್ರ ಎಲ್ಲೆಡೆ ಕಾಣಿಸುತ್ತಿತ್ತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ