ಅವನು ಶಂಕರ. ಊರಿನಲ್ಲೇ ಇದ್ದರೂ, ಊರಿಗೆ ಅವನು ಅಪರಿಚಿತನೇ. ಅಪ್ಪ-ಅಮ್ಮನನ್ನು ಕಳೆದುಕೊಂಡ ನಂತರ ಒಬ್ಬನೇ ಬದುಕುತ್ತಿದ್ದ. ಅನಾರೋಗ್ಯ ಬಂದಾಗ ಬಾಗಿಲು ತಟ್ಟಲು ಯಾರೂ ಇರಲಿಲ್ಲ. ಒಂದು ದಿನ ಜ್ವರದಿಂದ ಮಲಗಿದ್ದ. ಪಕ್ಕದ ಮನೆಯವರನ್ನು ಕರೆದರೂ,“ನಾಳೆ ನೋಡೋಣ, ಎಂದು ಹೇಳಿ ಹೋದರು.
ಅವನಿಗೆ ಔಷಧಿ ಬೇಕಿತ್ತು. ಯಾರಿಗೂ ಸಮಯ ಇರಲಿಲ್ಲ. ಹಬ್ಬ ಬಂದಾಗ ಅವನು ಒಬ್ಬನೇ. ಮನೆಯ ಕಾರ್ಯಕ್ರಮ ಬಂದಾಗ ಅವನು ಒಬ್ಬನೇ. ಅನಾರೋಗ್ಯ ಬಂದಾಗಲೂ ಅವನೇ ಒಬ್ಬನೇ. ಆದರೆ ಊರಿನವರ ಎಲ್ಲ ಕೆಲಸಗಳಿಗೂ ಅವನೇ ಬೇಕಿದ್ದ ಒಂದು ಬೆಳಗ್ಗೆ ಶಂಕರ ಸತ್ತು ಹೋಗಿದ್ದ. ಸುದ್ದಿ ಊರಿನಾದ್ಯಂತ ಹರಡಿತು.
“ಅಯ್ಯೋ! ನಮ್ಮ ಶಂಕರ ಹೋಗಿಬಿಟ್ಟನಾ?”ಎಂದು ಜನ ಓಡೋಡಿ ಬಂದರು. ನಿನ್ನೆ ಅವನಿಗೆ ಒಂದು ಲೋಟ ನೀರು ಕೊಡಲು ಸಮಯವಿಲ್ಲದವರು, ಇಂದು ಅವನ ತಲೆಯ ಬಳಿ ಕುಳಿತು ಕಣ್ಣೀರು ಹಾಕಿದರು. ಅವನು ತುಂಬಾ ಒಳ್ಳೆಯ ಮನುಷ್ಯ…ನಮ್ಮವನೇ ಆಗಿದ್ದ“ಅವನಿಗೆ ನಾವೆಲ್ಲ ಇದ್ದೆವು ಎಂದು ಒಬ್ಬೊಬ್ಬರೇ ಹೇಳತೊಡಗಿದರು.
ಶಂಕರನಿಗೆ ಬದುಕಿದ್ದಾಗ ಸಿಗದ ಜನಸಮೂಹ, ಅವನ ಸಾವಿನ ನಂತರ ಮನೆಯ ಮುಂದೆ ತುಂಬಿತ್ತು. ಕೊನೆಗೆ ಚಟ್ಟ ಕಟ್ಟಲಾಯಿತು.“ನಾಲ್ಕು ಜನ ಹೆಗಲು ಕೊಡಬೇಕು ಎಂದಾಗ. ಹತ್ತು ಜನ ಮುಂದೆ ಬಂದರು. ಶಂಕರನ ಜೀವನಪೂರ್ತಿ ಖಾಲಿಯಾಗಿದ್ದ ಅವನ ಮನೆಯ ಬಾಗಿಲು, ಅವನ ಸಾವಿನ ದಿನ ಮಾತ್ರ ಜನರಿಂದ ತುಂಬಿಹೋಯಿತು. ಚಟ್ಟವನ್ನು ಹೊತ್ತುಕೊಂಡು ಎಲ್ಲರೂ ಹೊರಟರು. ಮುಂದೆ ಸಾಗುತ್ತಿದ್ದ. ಬದುಕಿದ್ದಾಗ ಅವನಿಗೆ ಒಂದು ಹೆಗಲು ಕೊಡಲು ಯಾರಿಗೂ ಸಮಯ ಇರಲಿಲ್ಲ… ಸತ್ತ ಮೇಲೆ ನಾಲ್ಕು ಹೆಗಲು ಕೊಡಲು ಎಲ್ಲರಿಗೂ ಸಮಯ ಸಿಕ್ಕಿತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!