ಆ ಊರಿನಲ್ಲಿ ಕೃಷ್ಣನ ಜನ್ಮಾಷ್ಟಮಿಯ ದಿನವೆಂದರೆ ಎಲ್ಲರಿಗೂ ಹಬ್ಬ ಬೆಳಗಾಗುತ್ತಿದ್ದಂತೆ ಊರಿನ ಬೀದಿಗಳಲ್ಲಿ ಬಣ್ಣಗಳದ್ದೇ ಲೋಕ.ಯಾರೋ ಹುಲಿಯ ವೇಷ ,ಯಾರೋ ಕೃಷ್ಣನ ವೇಷ. ರಾಕ್ಷಸ ವೇಷ,ಯೋಧನ ವೇಷ.ಕೆಲವರು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ವೇಷ ಹಾಕಿಕೊಂಡಿದ್ದರು.ಕೆಲವರು ತಮ್ಮ ಮನೆಯ ಕಷ್ಟ ತೀರಿಸಿಕೊಳ್ಳಲು.ಇನ್ನೂ ಕೆಲವರು ತಮ್ಮಿಂದಾದಷ್ಟು ಸಹಾಯವನ್ನು ಇನ್ನೊಬ್ಬರ ಬದುಕಿಗೆ ತಲುಪಿಸಲು ವೇಷ ಧರಿಸಿ ಬೀದಿಗಿಳಿದಿದ್ದರು. ಅದನ್ನು ದೂರದಿಂದ ನೋಡುತ್ತಿದ್ದ ಕೃಷ್ಣ ಸಣ್ಣಗೆ ನಕ್ಕ. ಅವನಿಗೆ ತನ್ನ ಬದುಕು ನೆನಪಾಯಿತು. ನಾನೂ ಎಷ್ಟೋ ವೇಷಗಳನ್ನು ಧರಿಸಿದ್ದೆನಲ್ಲ, ಕಂಸನ ಸಂಹಾರಕ್ಕೆ ಒಂದು ವೇಷ. ಗೆಳೆಯನ ಉದ್ಧಾರಕ್ಕೆ ಒಂದು ವೇಷ. ಬಂಧುಗಳ ಸಹಾಯಕ್ಕೆ ಮತ್ತೊಂದು ವೇಷ. ಧರ್ಮವನ್ನು ಉಳಿಸಲು ಇನ್ನೊಂದು ವೇಷ. ವೇಷಗಳು ಬದಲಾಗಿದ್ದವು. ಆದರೆ ಉದ್ದೇಶ ಒಂದೇ
ಒಳಿತು. ವೇಷ ಧರಿಸುವುದರಲ್ಲಿ ತಪ್ಪಿಲ್ಲ. ಆದರೆ ಆ ವೇಷದಿಂದ ಇನ್ನೊಬ್ಬರಿಗೆ ನೋವಾಗಬಾರದು, ತೊಂದರೆಯಾಗಬಾರದು. ಯಾರ ಮನಸ್ಸಿಗೂ ಗಾಯವಾಗಬಾರದು. ಮಾನಸಿಕ ಹಿಂಸೆಯಾಗಬಾರದು. ಸ್ವಲ್ಪ ನಿಂತು ಮತ್ತೆ ಹೇಳಿದ. ನಿಮ್ಮ ವೇಷದಿಂದ ಮತ್ತೊಬ್ಬರ ಬದುಕಿನಲ್ಲಿ ಒಂದು ಸಣ್ಣ ಒಳ್ಳೆಯತನವಾದರೂ ಮೂಡುತ್ತಿದ್ದರೆ ಆ ವೇಷ ಖಂಡಿತ ಧರಿಸಿ. ಅಷ್ಟರಲ್ಲಿ ಊರಿನ ಬೀದಿಯಲ್ಲಿ ಬಣ್ಣ ಹಚ್ಚಿಕೊಳ್ಳುವ ಕೆಲಸ ಶುರುವಾಯಿತು. ವೇಷ ಬದಲಾಗಬಹುದು… ಬಣ್ಣ ಬದಲಾಗಬಹುದು. ನಮ್ಮ ಪಾತ್ರವೂ ಬದಲಾಗಬಹುದು. ಆದರೆ ಆ ವೇಷದೊಳಗಿನ ಮನಸ್ಸು ಇನ್ನೊಬ್ಬರಿಗೆ ಒಳಿತನ್ನು ಮಾಡುತ್ತಿದ್ದರೆ ಅದೇ ನಿಜವಾದ ಕೃಷ್ಣನ ವೇಷ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!