ಆ ಊರಿನಲ್ಲಿ ರಾಘವ ಮತ್ತು ಶಂಕರ ಅನ್ನೋ ಇಬ್ಬರು ಸ್ನೇಹಿತರಿದ್ದರು. ಪ್ರತಿದಿನ ಸಂಜೆ ಇಬ್ಬರೂ ಒಂದೇ ಮರದ ಕೆಳಗೆ ಕುಳಿತು ಗಂಟೆಗಟ್ಟಲೆ ಮಾತಾಡುತ್ತಿದ್ದರು. ಊರಿನವರು ಅವರನ್ನು ನೋಡಿ, ಇಬ್ಬರಿಗೂ ಬೇರೆ ಕೆಲಸವೇ ಇಲ್ಲ ದಿನವೆಲ್ಲ ಮಾತಾಡ್ತಾರೆ, ಅಂತ ನಗುತ್ತಿದ್ದರು. ಆದರೆ ಅವರ ಮಾತುಗಳು ಹಾಗೆ ಸುಮ್ಮನೆ ಕಳೆದುಹೋಗುತ್ತಿರಲಿಲ್ಲ. ಒಂದು ದಿನ ರಾಘವ ಕೇಳಿದ, ನಮ್ಮ ಊರಿನ ಶಾಲೆಯ ಮಕ್ಕಳು ಓದೋಕೆ ಪುಸ್ತಕಗಳೇ ಇಲ್ಲ. ನಾವು ಏನಾದರೂ ಮಾಡಬಹುದಾ? ಶಂಕರ ಹೇಳಿದ, ಇಬ್ಬರಿಂದ ಏನಾಗುತ್ತೆ? ರಾಘವ ನಕ್ಕು, ಇಬ್ಬರಿಂದ ಆಗಲ್ಲ ಅಂದ್ರೆ ಇನ್ನಿಬ್ಬರ ಜೊತೆ ಮಾತಾಡೋಣ. ಆ ಮಾತು ನಾಲ್ಕು ಜನರಾಯಿತು. ನಾಲ್ಕು ಜನರ ಮಾತು ನಲವತ್ತು ಜನರಾಯಿತು. ನಲವತ್ತು ಜನರ ಮಾತು ಒಂದು ಊರಿನ ಯೋಚನೆಯಾಯಿತು. ಕೆಲವೇ ದಿನಗಳಲ್ಲಿ ಊರಿನವರು ಸೇರಿ ಶಾಲೆಗೆ ಒಂದು ಪುಟ್ಟ ಗ್ರಂಥಾಲಯ ಕಟ್ಟಿದರು. ಆ ದಿನ ಅದೇ ಮರದ ಕೆಳಗೆ ಮತ್ತೆ ಇಬ್ಬರೂ ಕುಳಿತಿದ್ದರು. ಶಂಕರ ನಿಧಾನವಾಗಿ ಕೇಳಿದ, ನಮ್ಮ ಮಾತು ಇಷ್ಟು ದೊಡ್ಡ ಕೆಲಸ ಮಾಡುತ್ತೆ ಅಂತ ಅಂದುಕೊಂಡಿದ್ವಾ? ರಾಘವ ಹೇಳಿದ, ಮಾತು ದೊಡ್ಡದಲ್ಲ ಶಂಕರ ಮಾತಿನೊಳಗಿದ್ದ ಯೋಚನೆ ದೊಡ್ಡದು. ಕೆಲವೊಮ್ಮೆ ಮಾತುಕತೆಗಳು ನಮ್ಮ ಸಮಯವನ್ನು ಕಳೆಯುವುದಿಲ್ಲ ನಮ್ಮ ಬದುಕಿಗೆ ಹೊಸ ದಾರಿ ತೋರಿಸುತ್ತವೆ. ಒಂದು ಒಳ್ಳೆಯ ಮಾತು, ಒಂದು ಒಳ್ಳೆಯ ಯೋಚನೆಯ ಬೀಜವಾಗಬಹುದು. ಒಂದು ಯೋಚನೆ, ಒಂದು ಬದುಕನ್ನು ಬದಲಿಸಬಹುದು. ಹಾಗಾಗಿ ಮಾತುಕತೆಗಳನ್ನು ಕಡಿಮೆ ಮಾಡಬೇಡಿ. ಅರ್ಥವಿಲ್ಲದ ಮಾತುಗಳನ್ನು ಮಾತ್ರ ಕಡಿಮೆ ಮಾಡಿ. ಯಾಕೆಂದರೆ, ಕೆಲವು ಮಾತುಗಳು ಕಿವಿಗೆ ಕೇಳಿಸುತ್ತವೆ. ಆದರೆ ಕೆಲವು ಮಾತುಗಳು ಮನಸ್ಸಿನಲ್ಲಿ ಬೀಜವಾಗಿ ಬಿದ್ದು, ಬದುಕಿನುದ್ದಕ್ಕೂ ಮರವಾಗಿ ಬೆಳೆಯುತ್ತವೆ. ಹಾಗಾಗಿ ಮಾತನಾಡಿ…
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!