ಅವನು ಅವಳನ್ನು ಪ್ರೀತಿಸಿದ. ಅವಳು ಕೂಡ ಅವನನ್ನು ಪ್ರೀತಿಸಿದಳು. ಆದರೆ ಅವರಿಬ್ಬರ ಪ್ರೀತಿಯಲ್ಲಿ ಒಂದು ಸಣ್ಣ ವ್ಯತ್ಯಾಸವಿತ್ತು. ಅವನಿಗೆ ಪ್ರೀತಿಯೆಂದರೆ ಜೊತೆಯಾಗಿ ಬದುಕುವುದು. ಅವಳಿಗೆ ಪ್ರೀತಿಯೆಂದರೆ ಅವನು ಚೆನ್ನಾಗಿ ಬದುಕುವುದನ್ನು ನೋಡುವುದು. ಅವನು ಅವಳ ಹತ್ತಿರ ಇರಬೇಕೆಂದು ತನ್ನ ಬದುಕನ್ನೇ ಬದಲಿಸಿಕೊಳ್ಳಲು ಶುರುಮಾಡಿದ. ತನ್ನ ಕನಸುಗಳನ್ನು ಬದಿಗಿಟ್ಟ. ತನ್ನವರಿಂದ ದೂರವಾದ. ಅವಳ ಲೋಕಕ್ಕೆ ಬರಲು ತನ್ನ ಲೋಕವನ್ನೇ ಕಳೆದುಕೊಂಡ. ಅವಳು ಹಲವು ಬಾರಿ ಹೇಳಿದಳು, ನನ್ನನ್ನು ಪ್ರೀತಿಸು... ಆದರೆ ನನಗಾಗಿ ನಿನ್ನನ್ನೇ ಕಳೆದುಕೊಳ್ಳಬೇಡ. ಅವನಿಗೆ ಆ ಮಾತು ಅರ್ಥವಾಗಲಿಲ್ಲ. ಒಂದು ದಿನ ಅವರಿಗೆ ಬಹಳ ದಿನಗಳ ನಂತರ ಒಟ್ಟಿಗೆ ಕಳೆಯುವ ಅವಕಾಶ ಸಿಕ್ಕಿತು. ಅವನು ಅವಳನ್ನು ಬಿಗಿಯಾಗಿ ಅಪ್ಪಿಕೊಂಡ. ಆ ಕ್ಷಣದಲ್ಲಿ ಅವನಿಗೆ ಅನಿಸಿತು ಇದಕ್ಕಿಂತ ಇನ್ನೇನು ಬೇಕು?ಆದರೆ ಅವಳಿಗೆ ಅನಿಸಿತು ಇವನು ಹೀಗೆ ನನ್ನನ್ನೇ ಹಿಡಿದುಕೊಂಡಿದ್ದರೆ ಒಂದು ದಿನ ತನ್ನನ್ನೇ ಕಳೆದುಕೊಳ್ಳುತ್ತಾನೆ. ಅವಳು ಅವನ ಕೈ ಬಿಡಿಸಿದಳು. ಯಾವ ಜಗಳವೂ ಇಲ್ಲ, ಕಾರಣವೂ ಇಲ್ಲ, ಕೊನೆಯ ಮಾತೂ ಇಲ್ಲ. ಅವಳು ಹೊರಟುಹೋದಳು. ಅವನು ಕಾಯುತ್ತಲೇ ಇದ್ದ.ದಿನಗಳು ತಿಂಗಳುಗಳು ಕಳೆದವು. ಹೊರಗಿನ ಗಾಯಗಳು ನಿಧಾನವಾಗಿ ಮಾಯವಾದವು. ಅವನು ಮತ್ತೆ ತನ್ನ ಕನಸುಗಳ ಕಡೆಗೆ ನಡೆದ. ತನ್ನವರ ಬಳಿಗೆ ಮರಳಿದ. ಮತ್ತೆ ನಗಲು ಕಲಿತ. ಆದರೆ ಅವನೊಳಗೆ ಮಾತ್ರ ಒಂದು ಗಾಯ ಉಳಿಯಿತು. ಅವನಿಗೆ ಗೊತ್ತಿರಲಿಲ್ಲ ಅವಳು ಅವನನ್ನು ಮರೆತಿರಲಿಲ್ಲ. ಅವನ ಬದುಕಿಗೆ ಮತ್ತೆ ಪ್ರವೇಶಿಸದೆ ಅವನ ಗೆಲುವನ್ನ ನೋಡುತ್ತಿದ್ದಳು. ಒಂದು ದಿನ ಸಿಕ್ಕಳು ಅವಳು ನಕ್ಕಳು. ಅವನು ಕೂಡ ನಕ್ಕ. ಅಷ್ಟೇ. ಅವನು ತನ್ನ ದಾರಿಯಲ್ಲಿ ನಡೆದುಹೋದ.ಅವಳು ಅಲ್ಲೇ ಉಳಿದಳು. ಆ ದಿನ ಮೊದಲ ಬಾರಿಗೆ ಅವನಿಗೆ ಅರ್ಥವಾಯಿತು ಕೆಲವೊಮ್ಮೆ ನಮ್ಮನ್ನು ಬಿಟ್ಟು ಹೋಗುವವರು ನಮ್ಮನ್ನು ಪ್ರೀತಿಸದೆ ಹೋಗುವುದಿಲ್ಲ.ನಾವು ನಮ್ಮನ್ನೇ ಕಳೆದುಕೊಳ್ಳದಿರಲಿ ಎಂದು ಹೋಗುತ್ತಾರೆ. ಹಾಗಾದರೆ, ಹೆಚ್ಚು ಪ್ರೀತಿಸಿದ್ದು ಯಾರು ತನ್ನನ್ನೇ ಕಳೆದುಕೊಂಡು ಅವಳನ್ನು ಪ್ರೀತಿಸಿದ ಅವನಾ? ಅಥವಾ ಅವನನ್ನು ಕಳೆದುಕೊಂಡರೂ, ಅವನು ತನ್ನನ್ನೇ ಕಂಡುಕೊಳ್ಳಲಿ ಎಂದು ದೂರದಿಂದ ಪ್ರೀತಿಸಿದ ಅವಳಾ?
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!