ರಾಜೂ ಪ್ರತಿದಿನ ಸಂಜೆ ಅದೇ ಮರದ ಕೆಳಗೆ ಕುಳಿತುಕೊಳ್ಳುತ್ತಿದ್ದ. ಒಂದು ದಿನ ಮರವನ್ನು ನೋಡಿ ಕೇಳಿದ, “ನಿನಗೆ ಏನಾದರೂ ಬೇಸರವಾಗುತ್ತಾ? "ಮರ ಏನೂ ಹೇಳಲಿಲ್ಲ. “ನಿನ್ನನ್ನು ಕಡಿಯಲು ಬಂದಾಗ?ನಿನ್ನ ಕೊಂಬೆ ಮುರಿದಾಗ? ನಿನ್ನ ನೆರಳಿನಲ್ಲಿ ಕುಳಿತುಕೊಂಡವರೇ ನಿನ್ನನ್ನು ಮರೆತಾಗ?”

ಮರ ಮತ್ತೆ ಸುಮ್ಮನಿತ್ತು.ಸ್ವಲ್ಪ ದೂರ ಹರಿಯುತ್ತಿದ್ದ ನದಿಯ ಬಳಿ ಹೋದ. “ನೀನು ಎಷ್ಟು ದೂರದಿಂದ ಬರುತ್ತೀಯ?ಎಷ್ಟು ಕಲ್ಲುಗಳನ್ನು ದಾಟಿದ್ದೀಯ? ಎಷ್ಟು ಜನ ನಿನ್ನ ನೀರು ಕುಡಿದಿದ್ದಾರೆ?"ನದಿಯೂ ಉತ್ತರಿಸಲಿಲ್ಲ.ಅದು ತನ್ನ ದಾರಿಯಲ್ಲಿ ಹರಿಯುತ್ತಲೇ ಇತ್ತು.ರಾಜುವಿಗೆ ಇದ್ದಕ್ಕಿದ್ದಂತೆ ಅರ್ಥವಾಯಿತು... ಮರ ತನ್ನ ನೋವನ್ನು ಹೇಳಿಕೊಳ್ಳಲಿಲ್ಲ,ನದಿ ತನ್ನ ದಣಿವನ್ನು ಹೇಳಿಕೊಳ್ಳಲಿಲ್ಲ,ಆದರೂ ಎರಡೂ ತಮ್ಮ ಕೆಲಸವನ್ನು ನಿಲ್ಲಿಸಲಿಲ್ಲ. ಆದರೆ ಮನುಷ್ಯ...ಸ್ವಲ್ಪ ನೋವಾದರೂ ಕಥೆ ಹೇಳುತ್ತಾನೆ,ಸ್ವಲ್ಪ ಸಿಕ್ಕರೂ ಅದನ್ನು ಸಾಧನೆ ಎನ್ನುತ್ತಾನೆ,ಸ್ವಲ್ಪ ಕಳೆದುಕೊಂಡರೂ ಇಡೀ ಬದುಕೇ ಸೋತಂತೆ ಭಾವಿಸುತ್ತಾನೆ.ಹುಡುಗ ಮರದ ಕೆಳಗೆ ಮತ್ತೆ ಕುಳಿತ.ಈ ಬಾರಿ ಏನನ್ನೂ ಕೇಳಲಿಲ್ಲ.ಸುಮ್ಮನೆ ಅದರ ನೆರಳನ್ನು ಅನುಭವಿಸಿದ.ಅವನಿಗೆ ಆಗ ಗೊತ್ತಾಯಿತು ಕಥೆ ಇಲ್ಲದ ಜೀವಿ ಯಾವುದೂ ಇಲ್ಲ... ಕೆಲವು ಜೀವಿಗಳು ತಮ್ಮ ಕಥೆಯನ್ನು ಹೇಳುವುದಿಲ್ಲ ಬದುಕಿ ತೋರಿಸುತ್ತವೆ.”

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ