ಸಂಜೆಯ ಬೆಳಕು ನಿಧಾನವಾಗಿ ಕಡಿಮೆಯಾಗುತ್ತಿತ್ತು. ಗೋಡೆಯ ಮೇಲೆ ಎರಡು ನೆರಳುಗಳು ಜೊತೆಯಾಗಿ ನಿಂತಿದ್ದವು. ಒಂದರ ಮೇಲೆ ಬೆಳಕು ಬಿದ್ದಾಗ, ಇನ್ನೊಂದು ನೆರಳು ಅದಕ್ಕೆ ಜಾಗ ಮಾಡಿಕೊಟ್ಟಿತು. ಸ್ವಲ್ಪ ಹೊತ್ತಿನ ನಂತರ ಸೂರ್ಯ ಮತ್ತಷ್ಟು ಜಾರಿದ. ಎರಡೂ ನೆರಳುಗಳು ಉದ್ದವಾಗಿ ಒಂದನ್ನೊಂದು ಮುಟ್ಟಿದವು. ಕತ್ತಲೆ ಆವರಿಸುವ ಮುನ್ನ, ಅವು ಕೊನೆಯ ಬಾರಿಗೆ ಒಂದಾಗಿ ನಿಂತವು. ಇನ್ನೊಂದಷ್ಟು ನೆರಳುಗಳು ಕತ್ತಲೆಯಲ್ಲಿ ಮೊದಲಿನ ನೆರಳುಗಳ ನಡುವೆ ಓಡಾಡಿದ ಕಾರಣ ಎರಡೂ ನೆರಳುಗಳು ಮತ್ತೆಂದೂ ಬೆಳಕಿಗೆ ಬರದೇ ಕರಗಿ ಹೋದವು. ನಂತರ ಬೆಳಕು ಮಾಯವಾಯಿತು.
ನೆರಳುಗಳನ್ನ ಬೆಳಕೂ ಮರೆತು ಬಿಟ್ಟಿತು. ಮರುದಿನ ಬೆಳಕು ಮತ್ತೆ ಬಂದಾಗ, ಗೋಡೆಯ ಮೇಲೆ ಎರಡು ನೆರಳುಗಳು ಮತ್ತೆ ಹುಟ್ಟಿದವು. ಹಿಂದಿನ ದಿನದ ನೆರಳುಗಳಲ್ಲ, ಆ ನೆರಳುಗಳನ್ನ ಕರಗಿಸಲು ಇನ್ನೊಂದಷ್ಟು ನೆರಳುಗಳು ಬೆಳಕಿಗೆ ಬರಲು ತಯಾರಾಗುತ್ತಿದ್ದವು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!