ಅವಳು ಪ್ರತಿದಿನ ಬೆಳಗ್ಗೆ ಕನ್ನಡಿಯ ಮುಂದೆ ನಿಂತು ನಗುತ್ತಿದ್ದಳು. ಹೊರಗೆ ನೋಡಿದವರಿಗೆ ಅವಳು ತುಂಬಾ ಸಂತೋಷವಾಗಿದ್ದಳು. ಸ್ನೇಹಿತರ ಜೊತೆ ನಗುತ್ತಾ ಎಲ್ಲರಿಗೂ ಧೈರ್ಯ ತುಂಬುತ್ತಾ, ಸಾಮಾಜಿಕ ಜಾಲತಾಣದಲ್ಲಿ ಸುಂದರವಾದ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಳು.ಅದು ಅವಳ ಮೊದಲ ಬದುಕು ಎಲ್ಲರಿಗೂ ಕಾಣಿಸುವ ಬದುಕು. ಮನೆಗೆ ಬಂದಾಗ ಮಾತ್ರ ಆ ನಗು ಸ್ವಲ್ಪ ಕಡಿಮೆಯಾಗುತ್ತಿತ್ತು. ಅಮ್ಮ ಕೇಳುತ್ತಿದ್ದಳು, "ಏನಾಯ್ತು ಮಗಳೇ?""ಏನೂ ಇಲ್ಲಮ್ಮ..." ಎಂದು ಹೇಳಿ ಕೋಣೆಯ ಬಾಗಿಲು ಮುಚ್ಚುತ್ತಿದ್ದಳು.ಅದು ಅವಳ ಎರಡನೇ ಬದುಕು, ತನ್ನವರಿಗಷ್ಟೇ ಕಾಣಿಸುವ ಬದುಕು.
ಆದರೆ ರಾತ್ರಿ ಎಲ್ಲರೂ ಮಲಗಿದ ಮೇಲೆ… ಅವಳು ಕಿಟಕಿಯ ಬಳಿ ಕುಳಿತುಕೊಳ್ಳುತ್ತಿದ್ದಳು.ಕಣ್ಣೀರನ್ನು ಒರೆಸಿಕೊಳ್ಳುತ್ತಾ, “ನಾನು ನಿಜವಾಗಿಯೂ ಸಂತೋಷವಾಗಿದ್ದೀನಾ?” ಎಂದು ತನ್ನನ್ನೇ ಕೇಳಿಕೊಳ್ಳುತ್ತಿದ್ದಳು.ಅಲ್ಲಿ ಯಾರೂ ಇರಲಿಲ್ಲ. ಯಾವ ನಟನೆ ಇರಲಿಲ್ಲ.ಯಾವ ನಗು ಇರಲಿಲ್ಲ ಅದು ಅವಳ ಮೂರನೇ ಬದುಕು-ಅವಳಿಗೆ ಮಾತ್ರ ಗೊತ್ತಿದ್ದ ಬದುಕು.ಮರುದಿನ ಬೆಳಗ್ಗೆ ಮತ್ತೆ ಕನ್ನಡಿಯ ಮುಂದೆ ನಿಂತಳು. ಕಣ್ಣುಗಳ ಕೆಳಗೆ ನಿದ್ದೆಯ ಕೊರತೆಯ ಗುರುತುಗಳಿದ್ದವು.ಆದರೂ ತುಟಿಗಳ ಮೇಲೆ ಒಂದು ಸಣ್ಣ ನಗು ಮೂಡಿತು.ಈ ಬಾರಿ ಅದು ಯಾರನ್ನೂ ಮೋಸಗೊಳಿಸಲು ಅಲ್ಲ... ತನ್ನನ್ನೇ ಮತ್ತೆ ಬದುಕಿಸಿಕೊಳ್ಳಲು. ಕೆಲವು ಮನುಷ್ಯರ ನಗುವಿನ ಹಿಂದೆ ಒಂದು ಕಥೆಯಿರುತ್ತದೆ.ಅದನ್ನು ಕೇಳುವ ಮುನ್ನ ಅವರ ಮೌನವನ್ನು ಅರ್ಥಮಾಡಿಕೊಳ್ಳಬೇಕು ಅಲ್ಲವೇ?
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!