"ನಿನ್ನ ಬದುಕಿನ ಪ್ರತಿಯೊಂದು ಕ್ಷಣವನ್ನೂ ನಿನ್ನ ಮಗನಿಗೆ ಹೇಳು.ನಿನ್ನ ಕಷ್ಟ, ಸುಖ, ನೋವು, ನಲಿವು ಎಲ್ಲವನ್ನೂ ಅವನ ಮುಂದೆ ಬಿಚ್ಚಿಡು.ಆಗ ಅವನಿಗೆ ಬದುಕನ್ನು ನೋಡುವ ವಿಧಾನ ಅರ್ಥವಾಗುತ್ತದೆ, ಯಾರೋ ಒಮ್ಮೆ ಅಪ್ಪನಿಗೆ ಹೀಗೆ ಹೇಳಿದ್ದರು.
ಆದರೆ ಅಪ್ಪ ನನ್ನ ಬದುಕಿನ ಯಾವ ಕಷ್ಟವೂ ನನ್ನ ಮಗನಿಗೆ ಅರ್ಥವಾಗಬಾರದು. ಅವನ ಕನಸುಗಳಿಗೆ ನಾನು ಬೆಂಗಾವಲಾಗಿದ್ದರೆ ಸಾಕು."ಮಗ ಚಿಕ್ಕವನಿದ್ದಾಗ ಅವನ ಆಸೆಗಳೂ ಚಿಕ್ಕವೇ ಇದ್ದವು.ಒಂದು ಆಟಿಕೆ... ಒಂದು ಸೈಕಲ್ ಒಂದು ಹೊಸ ಶರ್ಟ್, ಅಪ್ಪ ತನ್ನ ಆಸೆಗಳನ್ನು ಬದಿಗಿಟ್ಟು ಮಗನ ಆಸೆಗಳನ್ನು ಈಡೇರಿಸುತ್ತಿದ್ದ. ದಿನಗಳು ಕಳೆದವು. ಮಗ ಬೆಳೆದ, ಆಸೆಯ ಪಟ್ಟಿಯೂ ಬೆಳೆಯುತ್ತಾ ಹೋಯಿತು. ಸೈಕಲ್ ಇದ್ದ ಜಾಗದಲ್ಲಿ ಬೈಕ್ ಬಂತು. ಬೈಕ್ ಇದ್ದ ಜಾಗದಲ್ಲಿ ಕಾರಿನ ಕನಸು ಬಂತು. ಸಣ್ಣ ಕನಸುಗಳಿಗೆ ಆಕಾಶದಷ್ಟೊಂದು ಬೆಲೆ ಬಂತು. ಅಪ್ಪ ಮಾತ್ರ ಅದೇ ಜಾಗದಲ್ಲಿದ್ದ.
ಅವನ ಹಳೆಯ ಚಪ್ಪಲಿಗಳು ಸವೆದು ಹೋಗಿದ್ದವು. ಬಟ್ಟೆಗಳು ಹರಿದುಹೋಗಿದ್ದವು. ಪರ್ಸ್ ನಲ್ಲಿದ್ದ ನೋಟುಗಳು ಮಡಚಿ ಮಡಚಿ ತೆಳುವಾಗಿದ್ದವು. ಕೈಗಳ ಮೇಲಿನ ಗಾಯಗಳು ಒಣಗುವ ಮೊದಲೇ ಮತ್ತೊಂದು ಗಾಯ ಮೂಡುತ್ತಿತ್ತು. ಆದರೆ ಮಗ ಯಾವುದನ್ನೂ ನೋಡಲಿಲ್ಲ.ಅಪ್ಪ ತನ್ನ ನೋವನ್ನು ತೋರಿಸಿರಲಿಲ್ಲವಲ್ಲ ಹಾಗಾಗಿ ಮಗನಿಗೆ ಅಪ್ಪನ ಬದುಕು ನೋವಿಲ್ಲದ ಬದುಕಾಗಿಯೇ ಕಾಣುತ್ತಿತ್ತು. ರಾತ್ರಿ ಮಗ ತನ್ನ ಆಸೆಗಳ ಪಟ್ಟಿಯನ್ನು ಹೇಳುತ್ತಿದ್ದ. ಅಪ್ಪ ಬೆಳಗ್ಗೆ ಎದ್ದು ಆ ಆಸೆಗಳನ್ನು ಪೂರೈಸಲು ಕೆಲಸ ಹುಡುಕಿಕೊಂಡು ಹೊರಡುತ್ತಿದ್ದ. ಕೊನೆಗೆ ಮಗ ಊರು ಬಿಟ್ಟು ಪರ ಊರಿಗೆ ಹೋದ.
ಕೆಲಸ ಸಿಕ್ಕಿತು.ಸಂಬಳ ಹೆಚ್ಚಾಯಿತು.ಅವನ ಮಾತುಗಳೂ ದೊಡ್ಡವಾದವು"ನಾನು ಚೆನ್ನಾಗಿ ದುಡ್ಡು ಗಳಿಸಿ, ಅಪ್ಪ-ಅಮ್ಮನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ..." ಎಂದು ಎಲ್ಲರ ಮುಂದೆ ಹೆಮ್ಮೆಯಿಂದ ಹೇಳುತ್ತಿದ್ದ. ಆದರೆ...ಅವನು ಹೇಳುತ್ತಿದ್ದ “ಒಂದು ದಿನ" ಮಾತ್ರ ಬರಲಿಲ್ಲ. ತಿಂಗಳುಗಳು ಕಳೆದವು.ಅಪ್ಪ ಮಾತ್ರ ಊರಿನಲ್ಲಿ ಒಂಟಿಯಾಗಿ ಬದುಕುತ್ತಿದ್ದ. ದೇಹಕ್ಕೆ ವಯಸ್ಸಾಗಿತ್ತು.ಕೈಗಳಿಗೆ ಮೊದಲಿನ ಶಕ್ತಿ ಇರಲಿಲ್ಲ.ಆದರೂ ಬೆಳಗ್ಗೆ ಎದ್ದು ಅಕ್ಕಪಕ್ಕದವರ ಮನೆ ಕೆಲಸಕ್ಕೆ ಹೋಗುತ್ತಿದ್ದ. ಬದುಕು ದೂಡಲು…
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!