ಅವರಿಬ್ಬರ ನಡುವೆ ಪ್ರೀತಿ ಕಡಿಮೆಯಾಗಿರಲಿಲ್ಲ. ಆದರೆ ಒಂದು ದಿನ, ಯಾರೋ ಬಿತ್ತಿದ ಸಂಶಯದ ಸಣ್ಣ ಬೀಜ ಅವರ ಬದುಕಿನೊಳಗೆ ಬಿದ್ದುಬಿಟ್ಟಿತು. “ಅವನು ನಿನ್ನನ್ನು ನಿಜವಾಗಿಯೂ ಪ್ರೀತಿಸುತ್ತಾನಾ?"ಅವಳು ನಿನ್ನಿಂದ ಏನನ್ನಾದರೂ ಮುಚ್ಚಿಡುತ್ತಿದ್ದಾಳಾ? ಮೊದಲು ಅದು ಕೇವಲ ಒಂದು ಪ್ರಶ್ನೆಯಾಗಿತ್ತು.ನಂತರ ಅನುಮಾನವಾಯಿತು. ಅನುಮಾನ ನಿಧಾನವಾಗಿ ನಂಬಿಕೆಯನ್ನು ತಿಂದುಹಾಕಿತು. ಒಬ್ಬರನ್ನೊಬ್ಬರು ಕೇಳಬೇಕಾದ ಮಾತುಗಳನ್ನು ಇಬ್ಬರೂ ತಮ್ಮೊಳಗೇ ಇಟ್ಟುಕೊಂಡರು.ಮಾತಾಡಬೇಕಾದಾಗ ಮೌನವಾಗಿದ್ದರು.

ಸ್ಪಷ್ಟಪಡಿಸಬೇಕಾದಾಗ ದೂರ ನಿಂತರು. "ಅವರೇ ಮೊದಲು ಮಾತನಾಡಲಿ..." ಎಂದು ಇಬ್ಬರೂ ಕಾಯುತ್ತಲೇ ಇದ್ದರು. ಕೊನೆಗೆ ಒಂದು ದಿನ, ಯಾವುದೇ ಜಗಳವಿಲ್ಲದೆ ಅವರ ದಾರಿಗಳು ಬೇರ್ಪಟ್ಟವು.ವರ್ಷಗಳು ಕಳೆದವು.ಜೀವನ ಇಬ್ಬರನ್ನೂ ಬೇರೆ ಬೇರೆ ಕಡೆಗೆ ಕರೆದೊಯ್ದಿತು.ಹೊಸ ಜನರು ಬಂದರು. ಹೊಸ ಬದುಕು ಶುರುವಾಯಿತು. ಆದರೆ ಹಳೆಯ ನೆನಪು ಮಾತ್ರ ಎಲ್ಲೋ ಮನಸ್ಸಿನ ಮೂಲೆಯಲ್ಲಿ ಹಾಗೆಯೇ ಉಳಿಯಿತು.ಹತ್ತು ವರ್ಷಗಳ ನಂತರ...ಅಕಸ್ಮಾತ್ ಇಬ್ಬರೂ ಮತ್ತೆ ಭೇಟಿಯಾದರು. ಸ್ವಲ್ಪ ಹೊತ್ತು ಮಾತೇ ಬರಲಿಲ್ಲ.ಯಾರೂ ನಿಜವಾಗಿಯೂ ತಪ್ಪಿತಸ್ಥರಾಗಿರಲಿಲ್ಲ.ಮಾತಾಡದೇ ಇದ್ದದ್ದೇ ಅವರ ದೊಡ್ಡ ತಪ್ಪಾಗಿತ್ತು. ಇಬ್ಬರೂ ನಕ್ಕರು.ಆ ನಗುವಿನೊಳಗೆ ಹತ್ತು ವರ್ಷಗಳ ನೋವಿತ್ತು.ಆದರೆ ಈಗ ಸತ್ಯ ತಿಳಿದಿತ್ತು. ಆದರೆ ಸಮಯ ಮರಳಿ ಬಂದಿರಲಿಲ್ಲ. ಅವರು ತಮ್ಮ ತಮ್ಮ ದಾರಿಯಲ್ಲಿ ಹೊರಟರು. ಹಿಂದೆ ತಿರುಗಿ ನೋಡಿದಾಗ ಇಬ್ಬರ ಕಣ್ಣಲ್ಲೂ ಒಂದೇ ಪ್ರಶ್ನೆ ನಾವು ಆಗ ಮೌನವಾಗಿರದೆ, ಒಮ್ಮೆ ಮನಬಿಚ್ಚಿ ಮಾತನಾಡಿದ್ದರೆ... ನಮ್ಮ ಬದುಕು ಹೇಗಿರುತ್ತಿತ್ತೋ? ”ಕೆಲವೊಮ್ಮೆ ಸಂಬಂಧಗಳನ್ನು ಮುರಿಯುವುದು ದ್ವೇಷವಲ್ಲ... ಮಾತನಾಡದ ಮೌನ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ