ಸ್ಮಶಾನದ ಮೂಲೆಯಲ್ಲಿ ಅವನು ಗುಂಡಿ ಅಗೆಯುತ್ತಿದ್ದ. ಪ್ರತಿ ಸಲವೂ ಗುಂಡಿ ಅಗಿಯೋದು ಅವನೇ. ಆದರೆ ಆ ದಿನ ಅಗೆಯುತ್ತಿದ್ದ ಗುಂಡಿ ಅವನ ಪಾಲಿಗೆ ಒಂದು ಕನಸಾಗಿತ್ತು. ಇದು ಮುಗಿದ ಮೇಲೆ ಸಿಗುವ ಹಣದಿಂದ ಮನೆಗೆ ಅಕ್ಕಿ ಒಯ್ಯುತ್ತೇನೆ.
ಎರಡು ದಿನದಿಂದ ಹಸಿದಿರುವ ಮಕ್ಕಳ ಹೊಟ್ಟೆ ತುಂಬಿಸುತ್ತೇನೆ.ಹೆಂಡತಿಯ ಮುಖದಲ್ಲಿ ನೆಮ್ಮದಿಯ ನಗು ನೋಡುತ್ತೇನೆ..." ಎಂಬ ಆಸೆಯಿಂದ ಅವನು ಮಣ್ಣನ್ನು ಎತ್ತುತ್ತಿದ್ದ. ಸೂರ್ಯ ಮುಳುಗುವ ಹೊತ್ತಿಗೆ ಗುಂಡಿ ಬಹುತೇಕ ಸಿದ್ಧವಾಗಿತ್ತು. ಕೊನೆಯ ಒಂದೆರಡು ಬುಟ್ಟಿ ಮಣ್ಣು ಮಾತ್ರ ಬಾಕಿಯಿತ್ತು. ಅಷ್ಟರಲ್ಲಿ ಎದೆ ಹಿಡಿದುಕೊಂಡ. ಒಂದು ಕ್ಷಣ ಉಸಿರು ನಿಂತಂತಾಯಿತು. ಮತ್ತೆ ಎದ್ದು ನಿಲ್ಲಲಿಲ್ಲ. ಅವನು ಅಗೆಯುತ್ತಿದ್ದ ಗುಂಡಿಯ ಪಕ್ಕದಲ್ಲೇ ಮತ್ತೊಂದು ಗುಂಡಿ ತೋಡಲಾಯಿತು.ಅವನು ಮನೆಗೆ ಅನ್ನ ತೆಗೆದುಕೊಂಡು ಹೋಗಬೇಕೆಂದು ಅಗೆದ ಗುಂಡಿ, ಕೊನೆಗೆ ಅವನನ್ನೇ ಮಣ್ಣಿನೊಳಗೆ ಸೇರಿಸಿತು. ಮನೆಗೆ ಹೆಣವೂ ಹೋಗಲಿಲ್ಲ.
ಅನ್ನವೂ ಹೋಗಲಿಲ್ಲ. ಹಸಿವಿನಿಂದ ಕಾಯುತ್ತಿದ್ದ ಕಣ್ಣುಗಳು ಬಾಗಿಲಿನತ್ತವೇ ನೋಡುತ್ತಲೇ ಇದ್ದವು. ಆ ದಿನ ಸ್ಮಶಾನದಲ್ಲಿ ಎರಡು ಗುಂಡಿಗಳಿದ್ದವು. ಒಂದರಲ್ಲಿ ಒಬ್ಬನ ದೇಹ ಮಲಗಿತ್ತು. ಇನ್ನೊಂದರಲ್ಲಿ ಒಂದು ಕುಟುಂಬದ ಆಸೆಗಳು, ಕನಸುಗಳು ಮತ್ತು ಉತ್ತರ ಸಿಗದ ಪ್ರಶ್ನೆ ಮಣ್ಣಾಗಿತ್ತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!