ಪರೀಕ್ಷೆಯಲ್ಲಿ ನಕಲು ಮಾಡಿದ್ದಕ್ಕೆ ಶಿಕ್ಷಕರು ಗದರಿಸಿದ್ದರು. ಹೆಚ್ಚೆಂದರೆ ಆ ವಿಷಯದಲ್ಲಿ ಅನುತ್ತೀರ್ಣಗೊಳಿಸಬಹುದಿತ್ತು. ಹೆತ್ತವರನ್ನು ಕರೆಸಬಹುದಿತ್ತು. ಮುಂದಿನ ಬಾರಿ ಮತ್ತೆ ಪರೀಕ್ಷೆ ಬರೆಯುವ ಅವಕಾಶ ನೀಡಬಹುದಿತ್ತು. ಅಷ್ಟಕ್ಕಿಂತ ಹೆಚ್ಚೇನು ಶಿಕ್ಷಿಸಲು ಸಾಧ್ಯವಿತ್ತು? ಆದರೂ ಅವನು ಸಾವನ್ನೇ ಆರಿಸಿಕೊಂಡಿದ್ದೇಕೆ? ಸಾವು ಅಷ್ಟು ಪ್ರಿಯವಾಗಿದ್ದರೆ, ಇಷ್ಟು ದಿನ ಅವನ ಜೊತೆಗಿದ್ದ ಬದುಕು ಯಾಕೆ ಅವನನ್ನು ಬಿಟ್ಟುಹೋಯಿತು? ಭಯ ಬದುಕಿನದ್ದೋ?

ಶಿಕ್ಷೆಯದ್ದೋ?ಹೆತ್ತವರದ್ದೋ?ಅಥವಾ ತನ್ನ ಮೇಲೆಯೇ ತಾನಿಟ್ಟುಕೊಂಡಿದ್ದ ನಿರೀಕ್ಷೆಗಳದ್ದೋ? ರ ಪ್ರಶ್ನೆಗಳಿಗೆ ಉತ್ತರ ಹುಡುಕಲು ನಾವು ಹೊರಟಾಗ, ಒಂದು ಸಂಗತಿ ಮಾತ್ರ ಸ್ಪಷ್ಟವಾಗುತ್ತದೆ ಹೊರಗಿನಿಂದ ಕಾಣುವ ಘಟನೆ ಮತ್ತು ವ್ಯಕ್ತಿಯ ಮನಸ್ಸಿನೊಳಗೆ ನಡೆಯುವ ಹೋರಾಟ ಒಂದೇ ಆಗಿರುವುದಿಲ್ಲ.ನಾವು ಅವನ ಮಾಡಿದ ತಪ್ಪನ್ನು ನೋಡುತ್ತೇವೆ.

ಅವನಿಗೆ ಸಿಗಬಹುದಾದ ಶಿಕ್ಷೆಯನ್ನು ಲೆಕ್ಕ ಹಾಕುತ್ತೇವೆ."ಇದಕ್ಕಾಗಿ ಯಾರಾದರೂ ಸಾಯುತ್ತಾರೆಯೇ?" ಎಂದು ಪ್ರಶ್ನಿಸುತ್ತೇವೆ. ಆದರೆ ಅವನ ಮನಸ್ಸಿನಲ್ಲಿ ಆ ಕ್ಷಣದಲ್ಲಿ ಎಷ್ಟು ಭಯವಿತ್ತು? ಎಷ್ಟು ಒತ್ತಡವಿತ್ತು? ಎಷ್ಟು ನೋವಿತ್ತು? ಎಷ್ಟು ಏಕಾಂತವಿತ್ತು? ಅದನ್ನು ನಾವು ತಿಳಿದಿರಲಿಕ್ಕಿಲ್ಲ.ಕೊನೆಗೂ ನಾವು ಸತ್ತವನ ಬದುಕಿಗೆ ನಮ್ಮದೇ ಆದ ತೀರ್ಪನ್ನು ನೀಡುತ್ತೇವೆ.ಆದರೆ ಅವನ ಮನಸ್ಸಿನೊಳಗೆ ನಡೆದ ಆಲೋಚನೆಗಳಿಗೆ ತೀರ್ಪು ನೀಡಲು ನಮಗೆ ಸಾಧ್ಯವಿಲ್ಲ. ಬಹುಶಃ ಅವನಿಗೆ ಬೇಕಾಗಿದ್ದದ್ದು ಶಿಕ್ಷೆಯಲ್ಲ... ಒಬ್ಬರು ಅವನ ಮಾತನ್ನು ಕೇಳಬೇಕಿತ್ತು.

ಬಹುಶಃ ಅವನಿಗೆ ಬೇಕಾಗಿದ್ದದ್ದು ಪರಿಹಾರವಲ್ಲ.."ಇದು ಮುಗಿದಿಲ್ಲ, ಇನ್ನೊಂದು ಅವಕಾಶ ಇದೆ" ಎಂದು ಹೇಳುವ ಒಂದು ಧ್ವನಿ.ಅದಕ್ಕೇ, ಯಾರೊಬ್ಬರ ಅಂತಿಮ ನಿರ್ಧಾರವನ್ನು ಅರ್ಥಮಾಡಿಕೊಳ್ಳುವ ಮೊದಲು, ಅವರ ಕೊನೆಯ ಕ್ಷಣವನ್ನು ಮಾತ್ರವಲ್ಲ-ಅದಕ್ಕೂ ಮುಂಚಿನ ಅವರ ಮೌನವನ್ನು ಕೇಳಬೇಕು. ಏಕೆಂದರೆ ಕೆಲವೊಮ್ಮೆ ಸಾವು ಒಂದು ಕ್ಷಣದ ನಿರ್ಧಾರವಾಗಿರಬಹುದು;ಆದರೆ ಆ ಕ್ಷಣದ ಹಿಂದೆ ತಿಳಿಯದ ನೋವಿನ ದೀರ್ಘ ಕಥೆಯಿರಬಹುದು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ