ಅವನು ಜೀವನದುದ್ದಕ್ಕೂ ಏನನ್ನೋ ಹುಡುಕುತ್ತಿದ್ದ. ಬಾಲ್ಯದಲ್ಲಿ ಅಮ್ಮನ ಮಡಿಲಲ್ಲಿ ನೆಮ್ಮದಿ ಹುಡುಕಿದ. ಯೌವನದಲ್ಲಿ ಸ್ನೇಹಿತರಲ್ಲಿ ತನ್ನತನ ಹುಡುಕಿದ. ಬೆಳೆದ ಮೇಲೆ ಹಣದಲ್ಲಿ ಸಂತೋಷ ಹುಡುಕಿದ. ಹೆಸರು ಬಂದಾಗ ಗೌರವದಲ್ಲಿ ತನ್ನ ಅಸ್ತಿತ್ವ ಹುಡುಕಿದ. ಎಲ್ಲವೂ ಸಿಕ್ಕಿತು, ಆದರೆ ಅವನಿಗೆ ಅವನೇ ಸಿಗಲಿಲ್ಲ. ಒಂದು ದಿನ ಅಮ್ಮನ ಹಳೆಯ ಪೆಟ್ಟಿಗೆಯನ್ನು ತೆರೆದಾಗ, ಬಾಲ್ಯದ ಒಂದು ಫೋಟೋ ಸಿಕ್ಕಿತು. ಫೋಟೋದಲ್ಲಿ ಅವನು ಅಮ್ಮನ ಕೈ ಹಿಡಿದು ನಗುತ್ತಿದ್ದ. ಅವನು ಬಹಳ ಹೊತ್ತು ಆ ಫೋಟೋವನ್ನೇ ನೋಡುತ್ತಿದ್ದ. ಆಗ ಪಕ್ಕದಲ್ಲಿದ್ದ ಅಮ್ಮ ನಿಧಾನವಾಗಿ ಕೇಳಿದರು, ಏನು ಹುಡುಕುತ್ತಿದ್ದೀಯ ಮಗಾ? ಅವನು ಕಣ್ಣೀರನ್ನು ಒರೆಸಿಕೊಂಡು ಹೇಳಿದ. ಅಮ್ಮ... ನನ್ನನ್ನೇ. ಅಮ್ಮ ನಕ್ಕು ಅವನ ತಲೆಯ ಮೇಲೆ ಕೈಯಿಟ್ಟು ಹೇಳಿದರು, ನೀನು ಎಲ್ಲೂ ಕಳೆದುಹೋಗಿಲ್ಲ ಕಣೋ ನಿನ್ನನ್ನು ನೀನೇ ಹುಡುಕುವಷ್ಟರಲ್ಲಿ ನಿನ್ನನ್ನು ಪ್ರೀತಿಸಿದವರನ್ನು ಮಾತ್ರ ಕಳೆದುಕೊಂಡಿದ್ದೀಯ. ಅವನು ಮೌನವಾಗಿ ಅಮ್ಮನ ಮಡಿಲಲ್ಲಿ ತಲೆ ಇಟ್ಟ. ಆ ದಿನ ಅವನಿಗೆ ಅರ್ಥವಾಯಿತು ಜೀವನದಲ್ಲಿ ನಮ್ಮೊಳಗಿನ ನಮ್ಮನ್ನ ನಾವು ಅರ್ಥೈಸಿಕೊಂಡರೆ ನಾವು ಚೆನ್ನಾಗಿರಬಹುದು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!