ಕಾಡಿನ ಹೂವುಗಳಿಗೆ ಊರಿನ ಮೇಲೆ ಯಾವ ಬೇಸರವೂ ಇರಲಿಲ್ಲ. ಊರಿನ ದೇವರ ಪಾದಕ್ಕೆ ಬೀಳುವ ಹೂವುಗಳಿಗೆ ಸಿಗುವ ಗೌರವ, ಕಾಡಿನ ಹೂವುಗಳಿಗೆ ಸಿಗಲಿಲ್ಲ. ಅವುಗಳ ಸುವಾಸನೆಯನ್ನು ಹೊಗಳುವವರಿರಲಿಲ್ಲ. ತಲೆಗೆ ಮುಡಿಯುವವರಿರಲಿಲ್ಲ. ದೇವರ ಮೂತಿಯ ಮೇಲೆ ಅರ್ಪಿಸುವವರೂ ಇರಲಿಲ್ಲ. ಆದರೂ ಅವು ಎಂದೂ ಕೊರಗಲಿಲ್ಲ. ಬೆಳಗಿನ ಸೂರ್ಯನ ಕಿರಣ ಬಿದ್ದಾಗ ಅರಳುತ್ತಿದ್ದವು. ಸಂಜೆ ಗಾಳಿ ಬೀಸಿದಾಗ ತಲೆದೂಗುತ್ತಿದ್ದವು. ಮಳೆಯ ಹನಿಗಳು ಬಿದ್ದಾಗ ನಕ್ಕಂತೆ ಹೊಳೆಯುತ್ತಿದ್ದವು. ಒಂದು ದಿನ ಊರಿನಿಂದ ಬಂದ ಗಾಳಿ ಕೇಳಿತು, "ನಿಮಗೆ ಊರಿನ ಹೂವುಗಳಂತೆ ದೇವರ ಪಾದದಲ್ಲಿ ಸ್ಥಾನ ಸಿಗಬೇಕೆಂಬ ಆಸೆಯಿಲ್ಲವೇ?"ಕಾಡಿನ ಹೂವು ಮೃದುವಾಗಿ ನಕ್ಕಿತು.
"ನಮ್ಮನ್ನು ಯಾರೂ ಕೀಳುವುದಿಲ್ಲ. ಯಾರೊ ದೇವರ ಪಾದಕ್ಕೆ ಇಡುವುದಿಲ್ಲ. ಆದರೆ ಪ್ರತಿದಿನ ಬೆಳಗ್ಗೆ ಸೂರ್ಯನೇ ನಮ್ಮನ್ನು ನೋಡಲು ಬರುತ್ತಾನೆ. ಗಾಳಿಯೇ ನಮ್ಮನ್ನು ಮುಟ್ಟುತ್ತದೆ. ಮಳೆಯೇ ನಮ್ಮನ್ನು ಮುದ್ದಿಸುತ್ತದೆ. ಈ ಕಾಡೇ ನಮ್ಮ ಮನೆ."
ಗಾಳಿ ಕ್ಷಣಕಾಲ ಮೌನವಾಯಿತು. ಹೂವು ಮತ್ತೆ ಹೇಳಿತು, "ಗೌರವಕ್ಕಾಗಿ ಬದುಕುವ ಹೂವು ಒಂದೇ ದಿನ ಒಣಗಬಹುದು. ನೆಮ್ಮದಿಗಾಗಿ ಅರಳುವ ಹೂವು ಪ್ರತಿದಿನವೂ ಹೂವಾಗಿರುತ್ತದೆ. ಅಂದು ಗಾಳಿ ಊರಿಗೆ ಮರಳಲಿಲ್ಲ. ಅದು ಕಾಡಿನಲ್ಲೇ ಉಳಿದು, ಆ ಹೂವುಗಳ ಪರಿಮಳವನ್ನು ಹೊತ್ತುಕೊಂಡು ಮರಗಳ ನಡುವೆ ಅಲೆದಾಡಿತು. ಊರಿನ ದೇವರ ಪಾದಕ್ಕೆ ಬೀಳದಿದ್ದರೂ, ಕಾಡಿನ ಮಣ್ಣಿಗೆ ಬಿದ್ದ ಹೂವಿಗೂ ತನ್ನದೇ ಆದ ಒಂದು ಆಕಾಶವಿದೆ ಅವಕಾಶವಿದೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!