ಒಂದು ಊರು ಆ ಊರಿನ ಹೆಸರು ಯಾರಿಗೂ ಗೊತ್ತಿರಲಿಲ್ಲ. ಆದರೆ ಆ ಊರಿನಲ್ಲಿ ಸತ್ಯ, ಪ್ರಾಮಾಣಿಕತೆ, ಕರುಣೆ, ಗೌರವ, ಮಾನವೀಯತೆ, ಶಿಸ್ತು, ಸಹನೆ, ಪ್ರೀತಿ ಹೀಗೆ ಬದುಕಿಗೆ ಅರ್ಥ ಕೊಡುವ ಎಲ್ಲ ಮೌಲ್ಯಗಳೂ ನೆಲೆಸಿದ್ದವು ಆದ ಕೆಲವು ದಿನಗಳಿಂದ ಅವುಗಳ ಮುಖದಲ್ಲಿ ಸಂತೋಷವಿರಲಿಲ್ಲ. ಒಂದು ದಿನ ನತ್ಯ ಹೇಳಿತು, "ನನ್ನನ್ನು ಪುಸ್ತಕಗಳಲ್ಲಿ ಓದುತ್ತಿದ್ದಾರೆ. ಆದರೆ ಬದುಕಿನಲ್ಲಿ ಹುಡುಕಿದರೆ ಕಾಣುತ್ತಿಲ್ಲ. "ಪ್ರಾಮಾಣಿಕತೆ " ನನ್ನ ಬಗ್ಗೆ ಭಾಷಣ ಮಾಡುವವರು ತುಂಬಾ ಜನ. ಆದರೆ ತಮ್ಮ ಕೆಲಸ ಬಂದಾಗ ನನ್ನನ್ನು ಬಾಗಿಲ ಹೊರಗೇ ನಿಲ್ಲಿಸುತ್ತಾರೆ. "ಗೌರವ ನಿಟ್ಟುಸಿರಿಟ್ಟಿತು. ಮಕ್ಕಳಿಗೆ ನನ್ನ ಬಗ್ಗೆ ಹೇಳುತ್ತಾರೆ. ವಿದ್ಯಾರ್ಥಿಗಳಿಗೆ ನನ್ನ ಮಹತ್ವವನ್ನು ತಿಳಿಸುತ್ತಾರೆ. ಹಿರಿಯರಿಗೆ ಗೌರವ ಕೊಡಬೇಕು ಎಂದು ಬೋಧಿಸುತ್ತಾರೆ. ಆದರೆ ಎದುರಿಗಿರುವ ಮನುಷ್ಯನನ್ನು ಮನುಷ್ಯನಾಗಿ ನೋಡುವುದನ್ನೇ ಮರೆತಿದ್ದಾರೆ."ಕರುಣೆ ಕಣ್ಣೀರಿಟ್ಟಿತು."ಬೇರೆಯವರ ನೋವಿನ ಬಗ್ಗೆ ಮಾತನಾಡಲು ಎಲ್ಲರಿಗೂ ಸಮಯವಿದೆ.
ಆದರೆ ಯಾರಾದರೂ ನಿಜವಾಗಿಯೂ ನೋವಿನಲ್ಲಿ ಇದ್ದಾಗ ಅವರ ಪಕ್ಕದಲ್ಲಿ ನಿಲ್ಲಲು ಮಾತ್ರ ಸಮಯವಿಲ್ಲ." ಆ ಮಾತು ಕೇಳಿ ಸಹನೆ ಕೂಡ ಮೌನವಾಯಿತು.ಕೊನೆಗೆ ಎಲ್ಲ ಮೌಲ್ಯಗಳೂ ಒಂದಾಗಿ ಸೇರಿ ಸಭೆ ಕರೆದವು.ಸಭೆಯಲ್ಲಿ ಒಂದು ಪ್ರಶ್ನೆ ಮಾತ್ರ ಇತ್ತು,ನಾವು ಈ ಭೂಮಿಯ ಮೇಲೆ ಇನ್ನೂ ಇರಬೇಕಾ?ಅಥವಾ ಮನುಷ್ಯರ ಬದುಕಿನಿಂದ ನಿಧಾನವಾಗಿ ಹೊರಟುಹೋಗಬೇಕಾ?”
ಚರ್ಚೆ ಜೋರಾಯಿತು. ಹೊರಟುಹೋಗೋಣ, ಎಂದಿತು ಪ್ರಾಮಾಣಿಕತೆ “ನಮ್ಮನ್ನು ಮಾತಿನಲ್ಲಿ ಉಳಿಸಿಕೊಂಡಿದ್ದಾರೆ. ಬದುಕಿನಲ್ಲಿ ಕೊಂದಿದ್ದಾರೆ," ಎಂದಿತು ಕರುಣೆ.ಆಗ ಮೌನವಾಗಿದ್ದ ಮಾನವೀಯತೆ ಎದ್ದು ನಿಂತಿತು.ಅದು ಎಲ್ಲರನ್ನೂ ನೋಡುತ್ತಾ ಹೇಳಿತು “ನಾವು ಹೊರಟುಹೋದರೆ ಗೆಲ್ಲುವುದು ಯಾರು?ಸುಳ್ಳಾ?ಸ್ವಾರ್ಥನಾ? ಅಹಂಕಾರನಾ? ದ್ವೇಷನಾ? ಇಲ್ಲ.ನಾವು ಇಲ್ಲಿಂದ ಹೊರಟುಹೋದರೆ ಮನುಷ್ಯನೊಳಗೆ ಉಳಿಯುವುದು ಕೇವಲ ದೇಹ ಮನುಷ್ಯತ್ವ ಮಾತ್ರ ಉಳಿಯುವುದಿಲ್ಲ. ಹೌದು.. ನಮ್ಮನ್ನು ಪಾಲಿಸುವವರು ಕಡಿಮೆಯಾಗಿದ್ದಾರೆ.ನಮ್ಮನ್ನು ಪುಸ್ತಕಗಳಲ್ಲಿ ಬಂಧಿಸಿದ್ದಾರೆ.ಭಾಷಣಗಳಲ್ಲಿ ಅಲಂಕರಿಸಿದ್ದಾರೆ.ಲೇಖನಗಳಲ್ಲಿ ಹೊಗಳಿದ್ದಾರೆ.ಆದರೆ ಬದುಕಿನಲ್ಲಿ?ನಾವು ನಿಧಾನವಾಗಿ ಅಕ್ಷರಗಳ ನಡುವೆ ಬದುಕಿರುವ ಸತ್ತ ಹೆಣಗಳಾಗುತ್ತಿದ್ದೇವೆ.ಆದರೂ ನಾವು ಹೋಗಬಾರದು.ಯಾಕೆಂದರೆ,ಒಬ್ಬ ಮಗು ಸತ್ಯ ಹೇಳುವವರೆಗೆ, ಒಬ್ಬ ವಿದ್ಯಾರ್ಥಿ ಪ್ರಾಮಾಣಿಕವಾಗಿ ನಡೆದುಕೊಳ್ಳುವವರೆಗೆ, ಒಬ್ಬ ಯುವಕ ಹಿರಿಯನಿಗೆ ಗೌರವ ಕೊಡುವವರೆಗೆ, ಒಬ್ಬ ಮನುಷ್ಯ ಇನ್ನೊಬ್ಬನ ಕಣ್ಣೀರನ್ನು ತನ್ನದೆಂದು ಭಾವಿಸುವವರೆಗೆ- ನಮಗೆ ಇಲ್ಲಿ ಜಾಗವಿದೆ.ನಾವು ಮನುಷ್ಯರನ್ನು ಬಿಟ್ಟು ಹೋಗುವುದಲ್ಲ.ಮನುಷ್ಯರೊಳಗೆ ಮತ್ತೆ ಹುಟ್ಟಬೇಕು.” ಸಭೆಯಲ್ಲಿ ಎಲ್ಲರೂ ಮೌನವಾದರು.ಕೊನೆಗೆ ಸತ್ಯ ನಿಧಾನವಾಗಿ ಕೇಳಿತು-ಆದರೆ ಹೇಗೆ?"ಮಾನವೀಯತೆ ನಗುತ್ತಾ ಹೇಳಿತು,ನಾವು ಮತ್ತೆ ಪುಸ್ತಕದಿಂದ ಹೊರಬರಬೇಕು.ಮಾತಿನಿಂದ ಬದುಕಿಗೆ ಬರಬೇಕು.ಬೋಧನೆಯಿಂದ ಆಚರಣೆಗೆ ಬರಬೇಕು.ಆ ದಿನ ಮೌಲ್ಯಗಳು ಊರನ್ನು ಬಿಟ್ಟು ಹೋಗೋದಿಲ್ಲ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!