ನಗರದಲ್ಲಿ ಸರ್ಕಾರ ಒಂದು ಹೊಸ ಆದೇಶ ಹೊರಡಿಸಿತು. ದೊಡ್ಡ ದೊಡ್ಡ ಹೋಟೆಲ್ಗಳು ಕಟ್ಟಡ ನಿರ್ಮಿಸುವಾಗ ಗ್ರಾಹಕರ ವಾಹನಗಳಿಗೆ ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ ಕಡ್ಡಾಯವಾಗಿ ಮಾಡಲೇಬೇಕು. ಜನರಿಗೆ ಅನುಕೂಲವಾಗಬೇಕು, ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆಯಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿತ್ತು.
ಆದೇಶ ಹೊರಬಂದ ಕೆಲವೇ ದಿನಗಳಲ್ಲಿ ನಗರದ ದೊಡ್ಡ ಹೋಟೆಲ್ಗಳ ಮುಂದೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣವಾಯಿತು. ದುಬಾರಿ ಕಾರುಗಳು ಒಂದರ ಹಿಂದೆ ಒಂದರಂತೆ ಬಂದು ನಿಲ್ಲತೊಡಗಿದವು.ಅದೇ ರಸ್ತೆಯ ಇನ್ನೊಂದು ಬದಿಯಲ್ಲಿ ರಮೇಶ ತನ್ನ ಸಣ್ಣ ಕೈಗಾಡಿ ಅಂಗಡಿಯನ್ನು ಇಡಲು ಎರಡು ತಿಂಗಳಿಂದ ಅಲೆದಾಡುತ್ತಿದ್ದ. ಒಂದು ಪುಟ್ಟ ಜಾಗ ಸಿಕ್ಕರೆ ಸಾಕು. ನಾಲ್ಕು ಇಡ್ಲಿ, ಎರಡು ದೋಸೆ, ಒಂದು ಕಪ್ ಚಹಾ ಮಾರಿ ಸಂಸಾರ ಸಾಗಿಸಬೇಕೆಂಬುದು ಅವನ ಆಸೆ. ಆದರೆ ಎಲ್ಲಿ ಹೋದರೂ ಒಂದೇ ಉತ್ತರ. ಇಲ್ಲಿ ಜಾಗವಿಲ್ಲ. ಅನುಮತಿ ಇಲ್ಲ. ನಿಯಮಗಳಿವೆ. ಕಾಯಬೇಕು!”ಪ್ರತಿದಿನ ಬೆಳಿಗ್ಗೆ ಅಧಿಕಾರಿಗಳ ಕಚೇರಿಗೆ ಅಲೆದು, ಸಂಜೆ ಖಾಲಿ ಕೈಯಲ್ಲಿ ಮನೆಗೆ ಮರಳುತ್ತಿದ್ದ ರಮೇಶನಿಗೆ ಈಗ ತನ್ನ ಅರ್ಜಿಯ ಮೇಲಿನ ನಂಬಿಕೆಗಿಂತ, ತನ್ನ ಬದುಕಿನ ಮೇಲಿನ ಭರವಸೆಯೇ ಕಡಿಮೆಯಾಗತೊಡಗಿತ್ತು.
"ಏನಪ್ಪಾ, ಏನು ನೋಡುತ್ತಿದ್ದೀಯಾ?"
ರಮೇಶ ಸಣ್ಣಗೆ ನಕ್ಕು ಹೇಳಿದ, "ಏನಿಲ್ಲ ಸಾರ್... ಈ ನಗರದಲ್ಲಿ ದೊಡ್ಡವರ ಕಾರುಗಳಿಗೆ ನಿಲ್ಲಲು ಜಾಗವಿದೆ. ಆದರೆ ಬಡವನ ಬದುಕು ನಿಲ್ಲದಂತೆ ದುಡಿಯಲು ಒಂದು ಸಣ್ಣ ಜಾಗವೂ ಇಲ್ಲವಲ್ಲ ಎಂದು ಯೋಚಿಸುತ್ತಿದ್ದೆ!”ಆ ಮಾತು ಕೇಳಿದ ವ್ಯಕ್ತಿ ಮೌನವಾದ.ಅಂದು ಸರ್ಕಾರದ ಆದೇಶದಿಂದ ರಸ್ತೆಯ ಮೇಲಿನ ವಾಹನಗಳ ದಟ್ಟಣೆ ಕಡಿಮೆಯಾಗಿರಬಹುದು. ಆದರೆ ರಮೇಶನ ಮನಸ್ಸಿನಲ್ಲಿದ್ದ ಬಡತನದ ದಟ್ಟಣೆ ಮಾತ್ರ ಇನ್ನೂ ಕಡಿಮೆಯಾಗಿರಲಿಲ್ಲ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!