ವೇದಿಕೆಯ ಮೇಲೆ ನೃತ್ಯ ಜೋರಾಗಿ ನಡೆಯುತ್ತಿತ್ತು. ಅದನ್ನು ನೋಡುತ್ತಿದ್ದ ಕಣ್ಣುಗಳು ಸಂಭ್ರಮದಿಂದ ಮಿನುಗುತ್ತಿದ್ದವು. ಚಪ್ಪಾಳೆಗಳ ಸದ್ದು ಮುಗಿಲು ಮುಟ್ಟಿತ್ತು. ವೇದಿಕೆಯ ಪಕ್ಕದಲ್ಲೇ ನೀರಿನ ಗೊಂಬೆಗಳನ್ನು ಮಾರುತ್ತಿದ್ದವನ ಕೈಕಾಲುಗಳೂ ಲಯಬದ್ಧವಾಗಿ ಕುಣಿಯುತ್ತಿದ್ದವು. ಒಂದು ಕಾಲದಲ್ಲಿ ಮಕ್ಕಳಿಗೆ ನೃತ್ಯ ಕಲಿಸುತ್ತಿದ್ದ ಆ ಕೈಗಳು ಇಂದು ಗೊಂಬೆಗಳನ್ನು ಮಾರುತ್ತಿದ್ದವು. ಮಕ್ಕಳಿಗೆ ಹೆಜ್ಜೆ ಹಾಕಲು ಕಲಿಸುತ್ತಿದ್ದ ಆ ಕಾಲುಗಳು ಇಂದು ಬದುಕಿನ ಬಂಡಿ ಎಳೆಯಲು ಹೆಜ್ಜೆ ಹಾಕುತ್ತಿದ್ದವು.ವೇದಿಕೆಯ ಮೇಲೆ ಕಲೆಯ ಸಂಭ್ರಮವಿತ್ತು. ವೇದಿಕೆಯ ಕೆಳಗೆ ಬದುಕಿನ ಹೋರಾಟವಿತ್ತು. ಕಾಲ ಬದಲಾಗಿತ್ತು, ಬದುಕು ದಿಕ್ಕು ಬದಲಿಸಿತ್ತು. ಆದರೆ ಅವನೊಳಗಿನ ನೃತ್ಯ ಮಾತ್ರ ಇನ್ನೂ ನಿಂತಿರಲಿಲ್ಲ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ