ಪ್ರಶ್ನೆಗಳಿಗೆ ಉತ್ತರ ಹುಡುಕಲೇಬೇಕು. ಇಲ್ಲವಾದರೆ, ಅವು ಮನಸ್ಸಿನೊಳಗೆ ತುಮುಲ ಸೃಷ್ಟಿಸುತ್ತವೆ. ಉತ್ತರ ಸಿಗದಿದ್ದಾಗ ಬದುಕೇ ಪ್ರಶ್ನೆಯಾಗಿ ಕಾಡತೊಡಗುತ್ತದೆ. ಹಾಗಾಗಿಯೇ ನಾನು ಅಮ್ಮನ ಬಳಿ ಪದೇಪದೇ ಅದೇ ಪ್ರಶ್ನೆಯನ್ನು ಕೇಳುತ್ತಿದ್ದೆ. ಪ್ರೀತಿ ಎಂದರೇನು? ಅದರ ನಿಜವಾದ ಲಕ್ಷಣಗಳೇನು?

ಕೊನೆಗೊಂದು ದಿನ ಅಮ್ಮ ಕೊಟ್ಟ ಉತ್ತರ ನನ್ನ ಯೋಚನೆಯ ದಿಕ್ಕನ್ನೇ ಬದಲಿಸಿತು“ಯಾವ ವ್ಯಕ್ತಿ ನಮ್ಮ ಬದುಕಿನಲ್ಲಿ ನೆಮ್ಮದಿಯನ್ನು ತುಂಬಿ, ಅವರು ದೂರವಾದಾಗ ಬದುಕೇ ಕಷ್ಟವೆನಿಸುತ್ತದೆಯೋ, ಅದು ಪ್ರೀತಿಯಿರಬಹುದು. ಯಾರ ಕಣ್ಣೀರನ್ನು ಒರೆಸಬೇಕೆಂದು ನಮ್ಮ ಮನಸ್ಸು ಸದಾ ಹಂಬಲಿಸುತ್ತದೆಯೋ, ಯಾರು ನಮ್ಮ ಕಣ್ಣೀರನ್ನು ಒರೆಸಲು ಸದಾ ಸಿದ್ಧರಿರುತ್ತಾರೋ, ಅಲ್ಲಿ ಪ್ರೀತಿಯಿರುತ್ತದೆ.

ಆದರೆ ನೆನಪಿರಲಿ, ಇವೆಲ್ಲವೂ ಪ್ರೀತಿಯ ಕೆಲವು ಲಕ್ಷಣಗಳಷ್ಟೇ, ಪ್ರತಿಯೊಂದು ನೋವೂ ಪ್ರೀತಿಯಲ್ಲ; ಪ್ರತಿಯೊಂದು ಕಾಳಜಿಯೂ ಪ್ರೀತಿಯಾಗಬೇಕೆಂದಿಲ್ಲ. ನಿನ್ನ ಬದುಕಿನಲ್ಲಿ ಇಂತಹ ಭಾವನೆಗಳಿದ್ದರೆ, ಅವುಗಳನ್ನು ಪ್ರೀತಿಯೆಂದು ಒಪ್ಪಿಕೊಳ್ಳುವ ಮೊದಲು ಆ ಸಂಬಂಧದಲ್ಲಿ ಗೌರವ, ನಂಬಿಕೆ ಮತ್ತು ಪರಸ್ಪರ ಕಾಳಜಿ ಇದೆಯೇ ಎಂದು ಅರಿತುಕೋ. ಇವೆಲ್ಲವೂ ಇಲ್ಲದಿದ್ದರೆ, ಅದನ್ನು ಪ್ರೀತಿಯೆಂದು ಒಪ್ಪಿಕೊಳ್ಳುವ ಆತುರ ಬೇಡ.” ಅಮ್ಮನ ಮಾತುಗಳು ನನ್ನೊಳಗಿನ ಗೊಂದಲಕ್ಕೆ ನಿಧಾನವಾಗಿ ಉತ್ತರ ನೀಡಿದವು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ