ತನ್ನವರ ಬದುಕು ಬೆಳಗಲೆಂದು ತನ್ನ ಕನಸುಗಳಿಗೆಲ್ಲ ಕತ್ತಲನ್ನು ಹೊದ್ದವನು ಅವನು. ತಂಗಿಯ ಆಸೆಗಾಗಿ, ತಮ್ಮನ ಓದಿಗಾಗಿ ತನ್ನ ಓದನ್ನು ಬಿಟ್ಟ. ಮನೆಯ ನೆಮ್ಮದಿಗಾಗಿ ತನ್ನ ಪ್ರೀತಿಯನ್ನು ಮರೆತ. ಮಕ್ಕಳ ಭವಿಷ್ಯಕ್ಕಾಗಿ ತನ್ನ ವರ್ತಮಾನವನ್ನೇ ಅಡವಿಟ್ಟ. ಹೀಗೆ ಒಂದೊಂದಾಗಿ ತನ್ನ ಆಸೆಗಳನ್ನು ತ್ಯಾಗ ಮಾಡುತ್ತಾ ಹೋದ. ಎಲ್ಲರ ಬದುಕು ಬದಲಾಯಿತು; ಆದರೆ ಅವನ ಬದುಕು ಮಾತ್ರ ಬದಲಾಗಲಿಲ್ಲ.

ಪ್ರತಿದಿನವೂ ಒಂದೇ ನಿರೀಕ್ಷೆ"ನನ್ನ ಬದುಕಿಗೂ ಒಳ್ಳೆಯ ದಿನಗಳು ಬರಬಹುದೇ?”ಒಂದು ದಿನ ಹಳೆಯ ಪೆಟ್ಟಿಗೆಯಲ್ಲಿದ್ದ ತನ್ನ ಕನಸುಗಳ ಪಟ್ಟಿಯನ್ನು ತೆರೆದ. ವರ್ಷಗಳ ಹಿಂದೆ ಬರೆದ ಆಸೆಗಳೆಲ್ಲ ಹಾಗೆಯೇ ಉಳಿದಿದ್ದವು. ಅವುಗಳ ಮೇಲಷ್ಟೇ ಕಾಲದ ಧೂಳು ಕುಳಿತಿತ್ತು. ಅವನ ಕಣ್ಣಂಚಿನಲ್ಲಿ ಹನಿಯೊಂದು ಜಾರಿತು. ಎಲ್ಲರ ಬದುಕು ಬದಲಾಯಿಸಲು ಬದುಕಿದ ಅವನು, ತನ್ನ ಬದುಕು ಬದಲಾಯಿಸಿಕೊಳ್ಳಲು ಮಾತ್ರ ಒಂದು ದಿನವನ್ನೂ ಮೀಸಲಿಡಲಿಲ್ಲ.ಹೊರಗೆ ಬೆಳಗಾಗುತ್ತಿತ್ತು. ಅವನ ಬದುಕಿನಲ್ಲಿ ಮಾತ್ರ ಇನ್ನೂ ನಾಳೆಯ ನಿರೀಕ್ಷೆ ಮುಗಿದಿರಲಿಲ್ಲ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ