ಡಾ. ವಿಜಯಾ
Da. Vijaya
೧೯೪೨
೪ ವೀಕ್ಷಣೆಗಳು
ವಿಜಯಾ ಅವರು ಹುಟ್ಟಿದ್ದು 1942ರ ಮಾರ್ಚ್‌ನಲ್ಲಿ. ಬಡ ಕುಟುಂಬದ ತಾಯಿಯನ್ನು ಕಳೆದುಕೊಂಡ ಹೆಣ್ಣುಮಗಳು ಅವರಿವರ ಮನೆಯಲ್ಲಿ ಬೆಳೆಯುತ್ತಾ ಹತ್ತನೇ ತರಗತಿ ಮುಟ್ಟುವ ಹೊತ್ತಿಗೆ ಮದುವೆಯಾಗಿ ಹದಿ ಹರೆಯದ ಅಂಚಿನಲ್ಲಿ ಎರಡು ಮಕ್ಕಳ ತಾಯಿಯಾಗಿ ಬಿಟ್ಟದ್ದು ಸೋಜಿಗವೇ. ಸಾಂಸಾರಿಕ…
ವಿಜಯಾ ಅವರು ಹುಟ್ಟಿದ್ದು 1942ರ ಮಾರ್ಚ್‌ನಲ್ಲಿ. ಬಡ ಕುಟುಂಬದ ತಾಯಿಯನ್ನು ಕಳೆದುಕೊಂಡ ಹೆಣ್ಣುಮಗಳು ಅವರಿವರ ಮನೆಯಲ್ಲಿ ಬೆಳೆಯುತ್ತಾ ಹತ್ತನೇ ತರಗತಿ ಮುಟ್ಟುವ ಹೊತ್ತಿಗೆ ಮದುವೆಯಾಗಿ ಹದಿ ಹರೆಯದ ಅಂಚಿನಲ್ಲಿ ಎರಡು ಮಕ್ಕಳ ತಾಯಿಯಾಗಿ ಬಿಟ್ಟದ್ದು ಸೋಜಿಗವೇ. ಸಾಂಸಾರಿಕ ಬದುಕು ಸರಿದೂಗದೆ ಸ್ವತಂತ್ರವಾದ ಬದುಕು ಕಟ್ಟಿಕೊಂಡ ವಿಜಯಮ್ಮ ತಮ್ಮ ಕಲಿಯುವ ಛಲದಿಂದಾಗಿ ಓದು ಮುಂದುವರೆಸಿ ಕನ್ನಡ ಎಂಎ ಮಾಡಿದ್ದು, ಪಿಎಚ್‌ಡಿ ಪ್ರಬಂಧ ಬರೆದು ಡಾಕ್ಟರೇಟ್ ಪದವಿ ಸಂಪಾದಿಸಿದ್ದು ಅನೇಕ ಹೆಣ್ಣುಮಕ್ಕಳಿಗೆ ಮಾದರಿ, 'ಪ್ರಜಾಮತ', 'ಮಲ್ಲಿಗೆ', 'ತುಷಾರ', 'ರೂಪತಾರ' ಮುಂತಾದ ಪತ್ರಿಕೆಗಳ ಸಂಪಾದಕೀಯ ವಿಭಾಗದಲ್ಲಿ ದುಡಿಯುತ್ತಾ ಮಕ್ಕಳನ್ನು ಬೆಳೆಸಿದ ವಿಜಯಮ್ಮ, ತಮ್ಮ ಕೆಲಸವೇ ತಪ್ಪಿಹೋಗಬಹುದೆಂಬ ಆತಂಕದಿಂದ 'ಇಳಾ ಮುದ್ರಣ' ಆರಂಭಿಸಿದರು. ತಮ್ಮದೇ 'ಇಳಾ ಪ್ರಕಾಶನ', 'ಜನಸಾಹಿತ್ಯ'ದ ಮೂಲಕ ಅನೇಕ ಹೊಸ ಲೇಖಕರ ಪುಸ್ತಕ ಗಳನ್ನು, ಗಂಭೀರ ಸಾಹಿತ್ಯ ಚಿಂತನೆಯನ್ನು ದಾಖಲಿಸಿದರು. ಪತ್ರಕರ್ತೆಯಾಗಿ ಸಿನಿಮಾ, ನಾಟಕ, ಸಾಹಿತ್ಯ, ಸಾಂಸ್ಕೃತಿಕ ಲೋಕದ ಒಳಹೊರಗನ್ನು ತಮ್ಮ ಬರಹದ ಮೂಲಕವೇ ತೆರೆದಿಟ್ಟರು. ಬೊಂಬೆಯಾಟದಂತಹ ಪ್ರಾಕಾರಗಳನ್ನು ಸ್ವತಃ ಹೆಂಗೆಳೆಯರನ್ನು ಕಟ್ಟಿಕೊಂಡು ಸಾಧಿಸಿದರು. ಬೀದಿನಾಟಕ ಗಳನ್ನು ಬರೆದು, ಆ ಪ್ರಕಾರವನ್ನು ಬೆಳೆಸುವ ಮೂಲಕ ನಾಡಿನಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. 'ಸಂಕುಲ' ದಂತಹ ಪತ್ರಿಕೆಯ ಮೂಲಕ ದೃಶ್ಯಮಾಧ್ಯಮದ ಎಲ್ಲಾ ಕಲೆಗಳ ಬಗ್ಗೆ ವಿಸ್ತ್ರತವಾದ ಚರ್ಚೆಗಳನ್ನು ಐದು ವರ್ಷ ನಡೆಸಿದರು. ಇವೆಲ್ಲವುಗಳ ಜೊತೆಗೆ ಮಹಿಳಾ ಸಬಲೀಕರಣ, ಸಿದ್ದ ಉಡುಪು ಕಾರ್ಮಿಕ ಮಹಿಳೆಯರ ಸಂಘಟನೆ, ಪೌರಕಾರ್ಮಿಕ ಸಂಘಟನೆ, ಮಾನಸ ಬಳಗ ಹೀಗೆ ಅನೇಕ ಸಂಘಟನೆಗಳ ಮೂಲಕ ಮಹಿಳೆಯರ ಬದುಕನ್ನು ಚಂದಗಾಣಿಸಲು ಪ್ರಯತ್ನಿಸಿದವರು. ಕರ್ನಾಟಕ ಚಲನಚಿತ್ರ ಇತಿಹಾಸ, ಕಿರಿಯರ ಕರ್ನಾಟಕ, ಸ್ವಾತಂತ್ರೋತ್ತರ ಕನ್ನಡ ಸಾಹಿತ್ಯ, ಕರ್ನಾಟಕ ಕಲಾದರ್ಶನ, ಬೆಂಗಳೂರು ದರ್ಶನದಂತ ಬೃಹತ್ ಗ್ರಂಥಗಳ ಸಂಪಾದಕರಾಗಿ ದುಡಿದರು. ತಮ್ಮ ಕೆಲಸಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಮಾಧ್ಯಮ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಮಾಸ್ತಿ ಪ್ರಶಸ್ತಿ, ಅನುಪಮ ಪ್ರಶಸ್ತಿ ಹೀಗೆ ಅಸಂಖ್ಯಾತ ಗೌರವಗಳನ್ನು ಪಡೆದಿರುವ ವಿಜಯಮ್ಮ ಅವರಿಗೆ ಈಗ ೮೪ರ ಹರೆಯ. ಸದಾ ಪುಟಿಯುವ ಉತ್ಸಾಹದ ಚಿಲುಮೆಯಾದ ವಿಜಯಮ್ಮ ಅವರಿಗೆ ಈ ನಾಡು ಸದಾ ಋಣಿ. ಇಂತಹ ವಿಜಯಮ್ಮ ಅವರ ಆತ್ಮಕಥನದ ಮೊದಲ ಭಾಗ "ಕುದಿ ಎಸರು".